tamanvi
ಸ್ಥಳೀಯ

ರೋಟರಿ ಯುವದಿಂದ ರಾಮಕೃಷ್ಣ ಆಶ್ರಮದಲ್ಲಿ ಚಿತ್ರಕಲಾ ಶಿಬಿರ | ಯುವ ಕಲಾವಿದ ಯುಧಿಷ್ಠಿರ್ ಗೌಡ ಅವರಿಂದ ಕಲಾ ತರಬೇತಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಆಶ್ರಮದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಒಂದು ವಾರದ ಉಚಿತ ಚಿತ್ರಕಲಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

maithri

rotary-yuva

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯ ಮಾತನಾಡಿ, ಚಿತ್ರಕಲೆಯು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಆಶ್ರಮದ ಮಕ್ಕಳಿಗೆ ಈ ಕಲಾತ್ಮಕ ಶಿಕ್ಷಣವನ್ನು ನೀಡಲು ಮುಂದಾಗಿರುವ ರೋಟರಿ ಯುವ ಸಂಸ್ಥೆಯ ಸೇವಾ ಮನೋಭಾವ ಮಾದರಿ ಎಂದರು.

ರೋಟರಿ ವಲಯ ಸೇನಾನಿ ಭರತ್ ಪೈ ಮಾತನಾಡಿ, ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿಯ ದ್ಯೆಯೋದ್ದೇಶಗಳನ್ನು ಮಕ್ಕಳಿಗೆ ವಿವರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಗೋಲ್ಡ್ ಮ್ಯಾನ್ ಸ್ಯಾಕ್ಸ್‌ನ ವಿಭಾಗ ಮುಖ್ಯಸ್ಥ ಪ್ರದೀಪ್ ರಾಮಕೃಷ್ಣ ಗೌಡ ಮಾತನಾಡಿ, ಯುವ ವರ್ಣ ಚಿತ್ರ ಕಲಾವಿದನಿಗೆ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟ ರಾಮಕೃಷ್ಣ ಸೇವಾಶ್ರಮ ಹಾಗೂ ರೋಟರಿ ಯುವ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಲೆಯ ಮೂಲಕ ವ್ಯಕ್ತಿತ್ವ ವಿಕಸನಗೊಳ್ಳುವ ಕುರಿತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿ, ವರ್ಣ ಚಿತ್ರ ಕಲಾವಿದ ಯುಧಿಷ್ಠಿರ್ ಗೌಡ ಶಿಬಿರದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮರಾಜ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಯುವ ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಭಿಷ್ ಕೊಳಕ್ಕೆಮಾರ್ ಕಾರ್ಯಕ್ರಮ ನಿರೂಪಿಸಿ, ನಿಯೋಜಿತ ಕಾರ್ಯದರ್ಶಿ ಅನೂಪ್ ಕೆ.ಜೆ. ವಂದಿಸಿದರು. ಆಶ್ರಮದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಬಿರಾರ್ಥಿಗಳಿಗೆ ಪೆನ್ಸಿಲ್ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು.

ಯುವ ವರ್ಣಚಿತ್ರ ಕಲಾವಿದರಾದ ಯುಧಿಷ್ಠಿರ್ ಗೌಡ:

ಪ್ರದೀಪ್ ರಾಮಕೃಷ್ಣ ಗೌಡ ಮತ್ತು ವಚನಾ ಜಯರಾಮ್ ದಂಪತಿಯ ಪುತ್ರನಾದ ಯುಧಿಷ್ಠಿರ್, ತಮ್ಮ 8ನೇ ತರಗತಿಯವರೆಗೆ ಬೆಂಗಳೂರಿನ ಗ್ರೀನ್‌ವುಡ್ ಹೈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಕೊಡಗಿನ ಗೋಣಿಕೊಪ್ಪದಲ್ಲಿರುವ ಕರುಂಬಯ್ಯ ಅಕಾಡೆಮಿ ಆಫ್ ಲರ್ನಿಂಗ್ ಅಂಡ್ ಸ್ಪೋರ್ಟ್ಸ್ (KALS) ಸಂಸ್ಥೆಗೆ ಸೇರಿ, ಪ್ರಸ್ತುತ ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ತಮ್ಮ ಶಾಲೆ ಮತ್ತು ವಸತಿ ನಿಲಯದ ಸುದ್ದಿಪತ್ರಗಳ ಸಂಪಾದಕೀಯ ತಂಡದ ಸಕ್ರಿಯ ಸದಸ್ಯರಾಗಿದ್ದಾರೆ.

ಬಾಲ್ಯದಿಂದಲೇ ಕಲೆಯ ಮೇಲೆ ಅಪಾರ ಆಸಕ್ತಿ ಹೊಂದಿರುವ ಯುಧಿಷ್ಠಿರ್ ಸ್ವಯಂ ಕಲಿತ ಕಲಾವಿದರಾಗಿದ್ದಾರೆ. ಅನಿಮೆ ಮತ್ತು ಮಂಗಾ ಶೈಲಿಯ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪೆನ್ಸಿಲ್ ಸ್ಕೆಚಿಂಗ್‌ನಲ್ಲಿ ಅತ್ಯುತ್ತಮ ನೈಪುಣ್ಯ ಹೊಂದಿದ್ದಾರೆ. ಶಾಲಾ ಮಟ್ಟದ ಹಾಗೂ ಅಂತರ್‌ಶಾಲಾ ಸ್ಪರ್ಧೆಗಳಲ್ಲಿ ತಮ್ಮ ವಿಶಿಷ್ಟ ಕಲಾಕೃತಿಗಳಿಗಾಗಿ ಅನೇಕ ಬಹುಮಾನಗಳು ಮತ್ತು ಪ್ರಶಸ್ತಿಗಳನ್ನು ಗಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 128