ಪುತ್ತೂರು: ಕ್ರೀಡೆ, ಕಲೆ ಮತ್ತು ಸಾಂಸ್ಕೃತಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾಝಿಮ್ ಕೆಮ್ಮಾಯಿ ಸಾರಥ್ಯದಲ್ಲಿ ಸ್ಥಾಪನೆಗೊಂಡು ಮುನ್ನಡೆಯುತ್ತಿರುವ ಆರ್‌ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು ವತಿಯಿಂದ 200 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಪೆನ್ನು ವಿತರಣಾ ಕಾರ್ಯಕ್ರಮ ಮೇ 10ರಂದು ಬೆಳಗ್ಗೆ 10.30ಕ್ಕೆ ಕೆಮ್ಮಾಯಿ ಜಂಕ್ಷನ್‌ನಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಸದಸ್ಯ ಆಶಿರ್ ಕುಂತೂರು ತಿಳಿಸಿದ್ದಾರೆ.
ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ವಿದ್ಯೆಯ ಹಾದಿಗೆ ಪ್ರೇರಣೆಯ ಕೈ ಹಿಡಿತ ಎಂಬ ಧ್ಯೇಯವಾಕ್ಯದಲ್ಲಿ ಆರ್‌ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಸಂಸ್ಥೆಯು ಪುಸ್ತಕದ ಕೊರತೆಯಿಂದ ವಿದ್ಯಾರ್ಥಿಗಳ ಕನಸು ನಿಲ್ಲಿಸಬಾರದು. ನಾವು ಅವರೊಂದಿಗೆ ಇದ್ದೇವೆ ಎನ್ನುವ ಭರವಸೆ ಇರಬೇಕು. ಕಲಿಕೆ ಒಂದು ಹಕ್ಕು ಅದು ಕೆಲವರಿಗೆ ಮಾತ್ರ ಸೀಮಿತವಾಗಿರಬಾರದು ಎಂಬ ನಿಟ್ಟಿನಲ್ಲಿ ಕ್ಲಬ್ ಕಾರ್ಯಾಚರಿಸುತ್ತಿದೆ. ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಲಿಗೆ ಬೇಕಾಗಿರುವ ಪುಸ್ತಕ ಮತ್ತು ಪೆನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಆರ್‌ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ವತಿಯಿಂದ ಮೂರನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೊದಲ ವರ್ಷದಲ್ಲಿ 50 ವಿದ್ಯಾರ್ಥಿಗಳಿಗೆ, 2ನೇ ವರ್ಷದಲ್ಲಿ 100 ವಿದ್ಯಾರ್ಥಿಗಳಿಗೆ ಹಾಗೂ ಈ ಬಾರಿ 250ರಿಂದ 300ರಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪೆನ್ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಏ. 14ರಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಉದ್ಘಾಟಿಸಿದ್ದಾರೆ. ಮೇ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ನಗರಸಭಾ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ, ನಿಕಟಪೂರ್ವ ಸದಸ್ಯ ಸುಂದರ ಪೂಜಾರಿ ಬಡಾವು, ಮಾಜಿ ಶಾಸಕ ಮೊಯ್ದೀನ್ ಬಾವ, ಯು.ಟಿ. ಫರೀದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಆರ್‌ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್‌ನ ಸ್ಥಾಪಕ ನಾಝಿಮ್ ಕೆಮ್ಮಾಯಿ, ಸದಸ್ಯರಾದ ಜುನೈಫ್ ಕೋಲ್ಪೆ, ನೌಫಲ್ ಕೆಮ್ಮಾಯಿ, ಇಕ್ಬಾಲ್ ಕೆಮ್ಮಾಯಿ, ಹಸೈನಾರ್ ಕೆಮ್ಮಾಯಿ ಉಪಸ್ಥಿತರಿದ್ದರು.























