ಬೆಂಗಳೂರು: ಬಿಎಸ್‌ಎಂ ಜೈನ್ ಅಸೋಸಿಯೇಷನ್ (ರಿ) ವತಿಯಿಂದ ಬೆಂಗಳೂರಿನ ವಿಜಯನಗರದಲ್ಲಿ ಭಾನುವಾರ ಜೈನ್ ಆಹಾರೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಗಣ್ಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಜೈನ ಸಮಾಜದ ಹಿರಿಯರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಧರ್ಮದ ರಕ್ಷಣೆ ಹಾಗೂ ಸಂಘಟನೆಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಸಂಘವು ಹಲವು ವರ್ಷಗಳಿಂದ ಸಮಾಜಮುಖಿ ಸೇವೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದನ್ನು ಅವರು ಶ್ಲಾಘಿಸಿದರು.
ಹಿರಿಯ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜೈನ ಧರ್ಮದ ಅಹಿಂಸೆ, ತ್ಯಾಗ ಹಾಗೂ ಭಾರತೀಯ ಸಂಸ್ಕೃತಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಬಳಿಕ ಕುಟುಂಬದವರೊಂದಿಗೆ ಆಹಾರೋತ್ಸವದಲ್ಲಿ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜೈನ್ ಸಮಾಜದ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಕಳೆದ 16 ವರ್ಷಗಳಿಂದ ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ಅಶಕ್ತರಿಗೆ ಸಹಾಯಧನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಘದ ಕಾರ್ಯವನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ₹2 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು. ಸುಮಾರು 350 ಕುಟುಂಬಗಳಿಗೆ 45ಕ್ಕೂ ಹೆಚ್ಚು ಕರಾವಳಿ ಶೈಲಿಯ ಜೈನ ಸಾಂಪ್ರದಾಯಿಕ ಖಾದ್ಯಗಳನ್ನು ಸವಿಯುವ ಅವಕಾಶ ಕಲ್ಪಿಸಲಾಯಿತು.
ಸಂಘದ ಗೌರವಾಧ್ಯಕ್ಷ ಡಾ. ವಿದ್ಯಾಸಾಗರ್, ಅಧ್ಯಕ್ಷ ಯಶೋಧರ ಅಧಿಕಾರಿ, ಉಪಾಧ್ಯಕ್ಷ ಪಣಿರಾಜ್ ಜೈನ್, ಖಜಾಂಚಿ ಮಹಾವೀರ ಆಳ್ವ, ಪದಾಧಿಕಾರಿಗಳಾದ ಲೋಕರಾಜ್ ಜೈನ್, ಸೂರಜ್ ಕುಮಾರ್, ಸುಭಾಷ್ ಚಂದ್ರ ಜೈನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಾಳ ಹರ್ಷೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.
























