ಧಾರ್ಮಿಕ

ಶ್ರೀನಿವಾಸನ ತೋರಿಸಿದ ಗೋವುಗಳ ರಕ್ಷಣೆ ನಮ್ಮ ಆದ್ಯತೆ: ಪೇಜಾವರ ಶ್ರೀ | ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಹಿಂದವಿ ಸಾಮ್ರಾಜ್ಯೋತ್ಸವ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತಿಲ ಪರಿವಾರ ಟ್ರಸ್ಟ್ ನೇತೃತ್ವದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ಸಹಿತ ದೇವರ ಆಗಮನದ ಬಳಿಕ ಹಿಂದವಿ ಸಾಮ್ರಾಜ್ಯೋತ್ಸವ ಜರಗಿತು.

chennai-shopping
maithri

ಆಶೀರ್ವಚನ ನೀಡಿದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಮಾಜ ಒಗ್ಗಟ್ಟಾಗಿದ್ದಾಗ ನಮ್ಮನ್ನು ಬಗ್ಗಿಸುವವರು ಯಾರು ಇಲ್ಲ. ಹಾಗಾಗಿ ನಮ್ಮ ಮುಷ್ಠಿ ಬಿಗಿದಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕು. ನಮ್ಮ ಸಮಾಜದ ಬಲ ತುಂಬುವ ಶಕ್ತಿ ದೈವಿ ಶಕ್ತಿಯಾದರೆ ಇನ್ನೊಂದು ರೀತಿಯಲ್ಲಿ ಗೋವುಗಳು ಕೂಡ ಶಕ್ತಿ ನೀಡುತ್ತದೆ. ಶ್ರೀನಿವಾಸ ಎಲ್ಲಿದ್ದಾನೆ ಎಂಬುದನ್ನು ಜಗತ್ತಿಗೆ ತೋರಿಸಿದ್ದು ಗೋವು. ಅಂತಹ ಗೋವಿನ ರಕ್ಷಣೆಯನ್ನು ಶ್ರೀನಿವಾಸ ಮಾಡಿರುವಾಗ ನಾವು ಗೋವುಗಳ ರಕ್ಷಣೆ ಮಾಡಲೇ ಬೇಕು. ಅದಕ್ಕಾಗಿ ಪುತ್ತೂರಿನಲ್ಲಿ ದೊಡ್ಡ ಗೋ ಶಾಲೆ ತೆರೆಯಬೇಕು. ಹಿಂದೆ ಮನೆ ಮನೆಯಲ್ಲೂ ಗೋ ಶಾಲೆಯಿತ್ತು. ಇವತ್ತು ಊರಿಗೊಂದಾದರೂ ಗೋ ಶಾಲೆ ಇರಬೇಕೆಂದ ಅವರು 10 ಎಕ್ರೆ ಭೂಮಿಯನ್ನು ಹೇಗಾದರೂ ಮಾಡಿ ಗೋ ಶಾಲೆಗೆ ನಿಗದಿಪಡಿಸಿ. ಗೋ ಶಾಲೆ ಮಾಡಬೇಕು. ಅದಕ್ಕಾಗಿ ಇವತ್ತೆ ಸಂಕಲ್ಪ ಮಾಡಬೇಕು. ಮುಂದಿನ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಒಳಗೆ ಗೋ ಶಾಲೆ ಮಾಡೋಣ ಎಂದರು.

ಧರ್ಮದ ಬಗ್ಗೆ ಸ್ವಲ್ಪವಾದರೂ ಆಳವಾದ ಜ್ಞಾನ ಇರಲಿ:

ಸುಬ್ರಹ್ಮಣ್ಯ ನರಸಿಂಹ ಸಂಪುಟದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ ವೈವಿಧ್ಯತೆಯಲ್ಲಿ ಏಕತೆ ಕಾಪಾಡುವ ಉದ್ದೇಶ ನಮ್ಮದು. ಇತರ ಧರ್ಮದಲ್ಲಿ ಕಡ್ಡಾಯವಾಗಿ ಒಂದು ದಿನವಾದರೂ ಧಾರ್ಮಿಕ ಕೇಂದ್ರಕ್ಕೆ ಹೋಗಬೇಕೆಂಬುದು ಇದೆ. ಆದರೆ ನಮ್ಮ ಪ್ರಾರ್ಥನ ಮಂದಿರದೊಳಗೆ ಹಿಂದೆ ಹಿರಿಯರು ನಿಯಮ ಜಾರಿಗೊಳಿಸದೆ ತೊಂದರೆ ಆಗಿದೆ. ಪುತ್ತೂರಿನಲ್ಲಿ ಕೇಶವಪ್ರಸಾದ್ ಮುಳಿಯ ಅವರ ನೇತೃತ್ವದಲ್ಲಿ ಸನಾತನ ಧರ್ಮದ ಸಂಸ್ಕಾರ ಕಾರ್ಯಕ್ರಮ ನಡೆಯುತ್ತಿದೆ ಎಂಬುದನ್ನು ನೆನಪಿಸಿದ ಅವರು  ಇಂತಹ ಸಂಸ್ಕಾರ ಪ್ರತಿ ಮನೆಯಲ್ಲೂ ಮಾಡದೆ ಇದ್ದರೆ ಮಕ್ಕಳು ದಾರಿ ತಪ್ಪುತ್ತಾರೆ. ಅತಿಯಾದ ಪೇಸ್‌ಬುಕ್, ವಾಟ್ಸಪ್, ಇನ್‌ಸ್ಟ್ರಾಗ್ರಂನಿಂದ ಇವತ್ತು ಯುವ ಸಮುದಾಯ ದಾರಿ ತಪ್ಪುತ್ತಿದೆ. ಮನೆಯೇ ಮೊದಲ ಪಾಠ ಶಾಲೆ. ಇದನ್ನು ಅಭ್ಯಾಸ ಮಾಡದಿದ್ದರೆ ಮೊದಲು ಮನೆಯ ಹಿರಿಯರಿಗೆ ತೊಂದರೆ. ಈ ನಿಟ್ಟಿನಲ್ಲಿ ಧರ್ಮದ ಬಗ್ಗೆ ಸ್ವಲ್ಪವಾದರೂ ಆಳವಾದ ಜ್ಙಾನ ಇರಲಿ ಎಂದರು.

ಅರುಣ್ ಕುಮಾರ್ ಪುತ್ತಿಲ ಅಭಿನವ ಶಿವಾಜಿ ಮಹಾರಾಜ್:

ಅರಕಲಗೂಡು ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು  ಆಶೀರ್ವಚನ ನೀಡಿ ಮಾತನಾಡಿ ಸನಾತನ ಹಿಂದು ಸಂಸ್ಕೃತಿ ಇವತ್ತು ಅರಿವಿಲ್ಲದೆ ಪಾಶ್ಚಾತ್ಯ ಸಂಸ್ಕೃತಿಯ ಕಡೆ ವಾಲುತ್ತಿದೆ. ಈ ನಿಟ್ಟಿನಲ್ಲಿ ಸನಾತನ ಸಂಸ್ಕೃತಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಅದಕ್ಕೆ ಪೂರಕವಾಗಿ ಇವತ್ತು ಶ್ರೀನಿವಾಸ ಕಲ್ಯಾಣೋತ್ಸವದ ಭವ್ಯ ಮೆರವಣಿಗೆಯಲ್ಲಿ ಸನಾನತ ಧರ್ಮ, ಸಂಸ್ಕೃತಿಯನ್ನು ಮತ್ತೆ ಕಂಡಿದ್ದೆನೆ. ಎಷ್ಟೋ ಉತ್ಸವದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಾರೆ. ಆದರೆ ಇವತ್ತು ಸನಾತನ ಧರ್ಮದ ಹಿಂದು ಉತ್ಸವ ನೋಡಿದ್ದೇನೆ. ಜಗತ್ತಿನ ಸಂಸ್ಕೃತಿಗೆ ಆದರ್ಶ ಪ್ರಾಯ ಭಾರತೀಯ ಸಂಸ್ಕೃತಿ. ಇವತ್ತು ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯನ್ನು ಹೊಗಳುತ್ತಾರೆ. ಭಾರತೀಯರು ಪಾಶ್ಚಾತ್ಯರ ಶ್ರೀಮಂತಿಕೆಯನ್ನು ಹೊಗಳುತ್ತಾರೆ. ನಾವು ಅತ್ತ ಕಡೆ ವಾಲದಂತೆ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತಿಲ ಪರಿವಾರ ಸನಾತನ ಹಿಂದು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದೆ. ಅರುಣ್ ಕುಮಾರ್ ಪುತ್ತಿಲರು ಅಭಿನವ ಶಿವಾಜಿ ಮಹಾರಾಜ್ ಆಗಿದ್ದಾರೆ ಎಂದರು.

ಕಲ್ಯಾಣೋತ್ಸವದಿಂದ ಲೋಕಕ್ಕೆ ಒಳ್ಳೆಯದಾಗಬೇಕು :
ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಅಶೀರ್ವಚನ ನೀಡಿ ಮಾತನಾಡಿ ಭಾರತ ಬಲಿಷ್ಠ ಆಗಬೇಕೆಂಬ ವಿಚಾರ ಆಗಾಗ ಕೇಳಿ ಬರುತ್ತದೆ. ಒಳ್ಳೆಯ ನಾಯಕತ್ವ ಸಿಕ್ಕಿದೆ. ಆದರೆ ನಮ್ಮೊಳಗಿನ ನೋವಿನ ಕಾರಣದಿಂದ ನಾವೆಲ್ಲ ಹರಿದು ಹೋಗಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ಸನ್ಯಾಸಿಗಳು ಪುತ್ತೂರಿನಲ್ಲಿ ಸೇರಿ ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ನವ ಹಿತವಾದ ಇತಿಹಾಸ ಕಂಡು ಹಿಂದು ಸಮಾಜ ಸದೃಢವಾಗಬೇಕು. ಈ ನಿಟ್ಟಿನಲ್ಲಿ ಶ್ರೀನಿವಾಸ ಕಲ್ಯಾಣ ನಮ್ಮ ಜೀವನದ ಉನ್ನತಿಯಾಗಲಿ ಎಂದ ಅವರು ಗಿರಿಜಾ ಕಲ್ಯಾಣ, ಶ್ರೀನಿವಾಸ ಕಲ್ಯಾಣ, ಸೀತಾರಾಮ ಕಲ್ಯಾಣ ಇವು ಹಿಂದು ಸಮಾಜದ ಕಲ್ಯಾಣಕ್ಕೆ ಇರುವಂತಹ ಕಾರ್ಯಕ್ರಮಗಳು. ಕಲ್ಯಾಣೋತ್ಸವದಿಂದ ಲೋಕಕ್ಕೆ ಒಳ್ಳೆಯದಾಗಬೇಕು ಎಂದರು.

ಸಂಬಂಧಗಳು ಗಟ್ಟಿಯಾಗಲು ಧಾರ್ಮಿಕ ಕಾರ್ಯ ಅಗತ್ಯ:
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿ ಮಾತನಾಡಿ ಸನಾತನ ಧರ್ಮದಲ್ಲಿರುವ ಹಬ್ಬಗಳು ಒಂದೊಂದು ಸಂದೇಶ ನೀಡುತ್ತವೆ. ಇವತ್ತು ಕಾಲ ಬದಲಾದಂತೆ ಭರವಸೆ, ಸಂಬಂದಗಳು ಬದಲಾಗಿದೆ. ಹಲವು
ಸಂಬಂದ ಮುರಿದು ಹೋಗಲು ಮುಖ್ಯ ಕಾರಣ ಧಾರ್ಮಿಕತೆಯ ಅರಿವು ಕಡಿಮೆ ಆಗಿದೆ. ಆಗ ಶ್ರೀನಿವಾಸ ಕಲ್ಯಾಣ ಉತ್ಸವ ಭಕ್ತಿಯಿಂದ ಆಚರಿಸಿದರೆ ಅದರ ಮೂಲಕ ಉತ್ತಮ ಸಂದೇಶ ಸಿಗುತ್ತದೆ. ಕುಟುಂಬಗಳು ಪರಸ್ಪರ ಸಂಬಂದ, ಧಾರ್ಮಿಕ ಪ್ರಜ್ಣೆ ಮೂಡಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಅರುಣ್ ಕುಮಾರ್ ಪುತ್ತಿಲ ಬಹಳ ದೊಡ್ಡ ಕೆಲಸ ಮಾಡುತ್ತಿದ್ದಾರೆ ಎಂದರು.

ಆಚಾರ, ವಿಚಾರ, ಸಂಪ್ರದಾಯ ಉಳಿಸಲು ಧರ್ಮಕ್ಷೇತ್ರ ಅಗತ್ಯ:
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ ಪುತ್ತೂರಿನಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣ ಭಗವಂತನ ಕಲ್ಯಾಣವಲ್ಲ ವಿಶ್ವದ ಕಲ್ಯಾಣ. ಇವತ್ತು ಈ ಕಾರ್ಯಕ್ರಮದಲ್ಲಿ ಹಿಂದವಿ ಸಾಮ್ರಾಜ್ಯದ ನೆಲೆಯನ್ನು ಕಂಡಿದ್ದೇವೆ. ಸಮರ್ಥರಾಮದಾಸ್ ಅವರು ಶಿವಾಜಿಯ ಗುರುಗಳಾಗಿ ಹಿಂದವಿ ಸಾಮ್ರಾಜ್ಯವನ್ನು ಕಟ್ಟಿದರು. ಅದನ್ನು ಬೆಳೆಸಿದ್ದು ಶಿವಾಜಿ. ಅಂತಹ ಸಾಮ್ರಾಜ್ಯವನ್ನು ಕಟ್ಟಿ ಉಳಿಸಲು ಒಗ್ಗಟ್ಟು ಬೇಕಾಗಿದೆ. ಆದರೆ ಪ್ರಸ್ತುತ ದಿನದಲ್ಲಿ ನಿಗೂಡವಾಗಿ ಮತಾಂತರ, ಡ್ರಗ್ಸ್ ಮಾಪಿಯ, ವಿರೋಧಿಗಳು ಬೆಳೆಯುವ, ವಿವಾಹ ವಿಚ್ಚೇಧನ, ತಾಯಂದಿರ ಕಣ್ಣೀರು, ಗೋವಿನ ರೋದನವನ್ನು  ಈ ಕಲಿಯುಗದಲ್ಲಿ ನಾವು ಯೋಚನೆ ಮಾಡಬೇಕಾಗಿದೆ. ಇಂತಹ ಸಂದರ್ಭ ಎಲ್ಲರನ್ನು ಎಚ್ಚರಗೊಳಿಸಲು ಇಂತಹ ಕಾರ್ಯಕ್ರಮ ಅಗತ್ಯ. ಸಮರ್ಥ ರಾಮದಾಸರು ಶಿವಾಜಿಗೆ ಯಾವ ಧೈಯವನ್ನು ಕೊಟ್ಟರೋ. ಇವತ್ತು ದೇಶದ ಉನ್ನತಿಗಾಗಿ ದೇಶ ಆಚಾರ ಸಂಪ್ರದಾಯ ಉಳಿಸಲು ಧರ್ಮ ಕ್ಷೇತ್ರ ಆಗಬೇಕು. ಅದಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತಿದೆ. ಇದರ ಜೊತೆಗೆ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶದಲ್ಲೂ ಇಡಿ ಸಮಾಜ ಒಗ್ಗಟ್ಟಾಗಿ ಕೈ ಜೋಡಿಸಬೇಕು. ಇದರಲ್ಲಿ ರಾಜಕೀಯ ಬೇಡ ಎಂದ ಹರಿರಾಮಕೃಷ್ಣ ಸಂಕೀರ್ತನೆ ಹಾಡಿದರು.

ಧರ್ಮಕ್ಕೆ ಚ್ಯುತಿಬಂದಾಗ ಧರ್ಮ ಗ್ರಂಥಗಳ ಅಧ್ಯಯನ ಅಗತ್ಯ:
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು  ಆಶೀರ್ವಚನ ನೀಡಿ ಮಾತನಾಡಿ ಯುದ್ದ ಪ್ರಾರಂಭದ ಸಂದರ್ಭ ಅರ್ಜುನ ಕೃಷ್ಣನ ಮೂಲಕ ಯುದ್ಧ ಮೈದಾನದ ನಡುವೆ ಹೋಗಿ ಗುರು ಹಿರಿಯರನ್ನು ನೋಡಿ ಕಂಗಾಲು ಆಗುತ್ತಾನೆ. ಆಗ ಶ್ರೀಕೃಷ್ಣನ ಉಪದೇಶದಿಂದ ಆತ ಮತ್ತೆ ಯುದ್ಧಕ್ಕೆ ಹೊರಡುತ್ತಾನೆ. ಅದು ಭಗವದ್ಗೀತೆಯ ಸಾಲುಗಳಲ್ಲಿ ಇದೆ. ಅದೇ ಪರಿಸ್ಥಿತಿ ನಮ್ಮಲ್ಲೂ ಇದೆ. ಸನಾತನ ಧರ್ಮದ ವಿಚಾರದಲ್ಲಿ ಚ್ಯುತಿ ಬಂದಾಗ ನಾವು ಎದುರಿಸಲು ಧರ್ಮ ಗ್ರಂಥಗಳ ಅಧ್ಯಯನ ಮಾಡಲೇ ಬೇಕು. ಶ್ರೀನಿವಾಸನ ಕಲ್ಯಾಣ ಉತ್ಸವದೊಂದಿಗೆ ನಮ್ಮೆಲ್ಲರ ಕಲ್ಯಾಣವಾಗಲಿ. ಸಂಘಟನೆ ಇದೆ ರೀತಿ ಮುಂದುವರಿಯಲಿ ಎಂದರು.

ಅರುಣ್ ಕುಮಾರ್ ಪುತ್ತಿಲರಿಂದ ಭಗೀರಥ ಪ್ರಯತ್ನ:
ಕನ್ಯಾನ ಶ್ರೀ ಕ್ಷೇತ್ರ ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ ಸಂಘಟನೆ ಮಾಡಲು ಭಗೀರಥ ಪ್ರಯತ್ನ ಬೇಕು ಅದನ್ನು ಅರುಣ್ ಕುಮಾರ್ ಪುತ್ತಿಲ ಮಾಡಿದ್ದಾರೆ. ಇದರ ಹಿಂದಿನ ಕಷ್ಟ ಪುತ್ತಿಲರಿಗೆ ಮಾತ್ರ ಗೊತ್ತು. ಇಂತಹ ಕಾರ್ಯಕ್ರಮ ಹಿಂದು ರಾಷ್ಟ್ರದ ಉಳಿವಿಗೆ ಕಾರಣವಾದಿತು ಎಂದರು.

ದೇಶ, ದೇವಸ್ಥಾನ, ದೈವಸ್ಥಾನದ ವಿಚಾರ ಬಂದಾಗ ನಾವೆಲ್ಲ ಒಂದೆ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಹಿಂದೆ ಶ್ರೀನಿವಾಸ ಕಲ್ಯಾಣ ನೋಡಲು ತಿರುಪತಿಗೆ ಹೋಗಬೇಕಾಗಿತ್ತು. ಇವತ್ತು ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಸತತ ಮೂರು ವರ್ಷ ಶ್ರೀನಿವಾಸ ಕಲ್ಯಾಣೋತ್ಸವವನ್ನು ನೋಡುವ ಭಾಗ್ಯ ನೀಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದೆ ಸಲ್ಲಿಸುತ್ತೇನೆ. ನಾನು ಈ ಕಾರ್ಯಕ್ರಮದಲ್ಲಿ ನಿರಂತರ ಬಾಗಿಯಾಗಿದ್ದೆನೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ. ಭಕ್ತರ ಸಂಖ್ಯೆಯು ಜಾಸ್ತಿಯಾಗಿದೆ. ಕಾರ್ಯಕ್ರಮದಲ್ಲಿ ಹಲವಾರು ಬದಲಾವಣೆ ಕಂಡಿದ್ದೆನೆ. ಇದೆಲ್ಲ ಅರುಣ್ ಕುಮಾರ್ ಪುತ್ತಿಲ ಅವರ ನಾಯಕತ್ವ ಮತ್ತು ಯುವಕರ ತಂಡದ ಕೆಲಸ ಕಾರ್ಯವಾಗಿದೆ. ಪುತ್ತಿಲ ಪರಿವಾರ ಕೇವಲ ದೇವತಾ ಕಾರ್ಯಕ್ಕೆ ಮಾತ್ರವಲ್ಲ ಸಮಾಜದಲ್ಲಿ ನೊಂದವರ ಬಾಳಿಗೆ ಬೆಳಕಾಗಿ ಕೆಲಸ ಮಾಡುತ್ತಿರುವುದನ್ನು ಕಂಡಿದ್ದೇನೆ ಎಂದ ಅವರು ಈ ಯುವಕರ ತಂಡ ನೋಡುವಾಗ ಸ್ವಾಮಿ ವಿವೇಕಾನಂದ ಮಾತಿನಂತೆ ಬಲಿಷ್ಠ ನೂರು ಯುವಕರನ್ನು ಕೊಟ್ಟರೆ ಈ ಭಾರತ ಚಿತ್ರಣವನ್ನು ಬದಲಾಯಿಸುತ್ತೇನೆ ಎಂದರು. ಅಂತಹ ಯುವಕರು ಪುತ್ತಿಲ ಪರಿವಾರದಲ್ಲಿ ನಾನು ಕಾಣುತ್ತಿದ್ದೇನೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ನಮ್ಮ ಪಕ್ಷ ಬೇರೆ ಆಗಿರಬಹುದು. ತತ್ವಗಳು ಬೇರೆ ಬೇರೆ ಆಗಿರಬಹುದು. ಆದರೆ ದೇಶದ, ದೇವಸ್ಥಾನ, ದೈವಸ್ಥಾನದ ವಿಚಾರ ಬಂದಾಗ ನಮ್ಮ ಉದ್ದೇಶ ಎಲ್ಲರದ್ದು ಒಂದೇ ಆಗಿರಬೇಕು. ಆಗ ದೇಶ, ದೇವಸ್ಥಾನ ಅಭಿವೃದ್ಧಿಯಾಗುತ್ತದೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂರಾರು ಕಾರ್ಯಕ್ರಮ ನಿರಂತರ ನಡೆಯುತ್ತಿದೆ. ಆ ಸಂದರ್ಭ ಸರಿಯಾದ ಸೌಲಭ್ಯ ಒದಗಿಸಲು ದೇವಸ್ಥಾನದ ಅಭಿವೃದ್ಧಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರು ಸಹಕರಿಸುವಂತೆ ವಿನಂತಿ ಎಂದರು.

ನಾವು ಸಂಘಟನೆ ಮಾಡುವವರು, ವಿಗಟನೆ ಮಾಡುವವರಲ್ಲ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹಪ್ರಸಾದ್ ಅವರು ಮಾತನಾಡಿ ೮ ಮಠದ ಯತೀವರ್ಯರ ಆಶೀರ್ವಚನದಿಂದ ಬಹಳಷ್ಟು ಶಕ್ತಿ ಬಂದಿದೆ. ಎಲ್ಲಾ ಶ್ರೀಗಳ ಒಳಾರ್ಥ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವುದಾಗಿದೆ. ಅದೇ ರೀತಿ ಸಂಘಟನೆಯು ಬ್ಯಾನರ್ ಹರಿದವರಿಗಾಗಲಿ ಅಥವಾ ತೊಂದರೆ ಕೊಡುವವರಿಗಾಗಲಿ ಎಲ್ಲೂ ಕೆಟ್ಟದು ಬಯಸಿಲ್ಲ. ನಾವು ಯಾರಿಗೂ ವಿಗಟನೆ ಮಾಡುವವರಲ್ಲ. ನಾವು ಸಂಘಟನೆ ಮಾಡುವವರು. ಇದು ಪುತ್ತಿಲ ಕಲ್ಯಾಣವಲ್ಲ. ಇದು ಲೋಕಲ್ಯಾಣರ್ಥವಾಗಿ ನಡೆಯುವ ಕಾರ್ಯಕ್ರಮ. ಇದರ ಉದ್ದೇಶವೇ ಲೋಕ ಕಲ್ಯಾಣಾರ್ಥ. ಬೇಂದ್ರೆಯವರು ತನ್ನ ಕವಿತೆಯಲ್ಲಿ ಮೂರು ಸಾಗರ, ನೂರು ಮಂದಿರ, ದೈವ ಸಾಸಿರ ಇದ್ದೋಡೆ, ಸಿಂಧು ಇದ್ದೋಡೆ, ಗಂಗೆ ಇದ್ದೋಡೆ, ಗಿರಿ ಹಿಮಾಲಯವಿದ್ದೋಡೆ, ವೇದ ವಿದ್ದೋಡೆ, ಶಾಸ್ತ್ರವಿದ್ದೋಡೆ, ಘನ ಪರಂಪರೆವಿದ್ದೋಡೆ, ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ನಾವು ಹುರಿದುಂಬಿಸುವ ಕೆಲಸ ಮಾಡುತ್ತಾ ಇದ್ದೇವೆ ಎಂದರು.

ಮುಂದಿರುವ ನೂರಾರು ಸವಾಲಿಗೆ ಉತ್ತರ ಕೊಡುವ ಶಕ್ತಿ ಸಿಗಲಿದೆ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ಶತಾಬ್ದಿಯ ನೆನಪು ಶಾಶ್ವತವಾಗಿ ಉಳಿಯಬೇಕೆನ್ನುವ ನಿಟ್ಟಿನಲ್ಲಿ ೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ ಜೋಡಿಸಿದ್ದೇವೆ. ಹಿಂದು ಸಮಾಜಕ್ಕೆ ಶಕ್ತಿ ಕೊಡಬೇಕು ಮತ್ತು ಸನಾತನ ಹಿಂದು ಧರ್ಮ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿಂದು ಸಮಾಜದ ಮುಂದಿರುವ ನೂರಾರು ಸವಾಲುಗಳಿಗೆ ಒಂದಾಗಿ ಒಟ್ಟಾಗಿ ಸಂದೇಶ ಕೊಡುವ ಕಾರ್ಯಕ್ರಮ ಇದಾಗಬೇಕು. ಹಿಂದವಿ ಸ್ರಾಮಾಜ್ಯೋತ್ಸವದ ಮೂಲಕ ಹಿಂದು ಧರ್ಮದ ಮುಂದೆ, ಕಾರ್ಯಕರ್ತರ, ಸಂಘಟನೆ ಮುಂದೆ ಯಾವ ಸವಾಲು ಇದ್ದರೂ ಅದಕ್ಕೆ ಉತ್ತರ ಕೊಡುವ ಶಕ್ತಿ ಸಿಗಲಿದೆ ಎಂದ ಅವರು ಕಳೆದ ಎರಡೂವರೆ ವರ್ಷಗಳಿಂದ ಸಮಾಜದಲ್ಲಿ ಅಶಕ್ತರ ಶೋಷಿತರ ಬಾಳಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೆರವಾಗಿದೆ. ಇವತ್ತಿನ ಕಾಲದಲ್ಲಿ ಗೋ ಮಾತೆಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಮತ್ತು ಹಿಂದು ಸಮಾಜಕ್ಕೆ ಅವಮಾನ ಆದಾಗ ಬೇರೆ ಬೇರೆ ರೀತಿಯಲ್ಲಿ ಟ್ರಸ್ಟ್ ಮಲಕ ಕೆಲಸ ಮಾಡಿದ್ದೇವೆ. ಮುಂದಿನ ದಿವಸ ಹಿಂದುತ್ವದ ಪ್ರತಿಪಾದನೆ ಮಾಡುವ ಸಂಕಲ್ಪದೊಂದಿಗೆ ಕೆಲಸ ಮಾಡಲಿದ್ದೇವೆ ಎಂದರು.  

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷರಾದ ಕೇಶವಪ್ರಸಾದ್ ಮುಳಿಯ, ದಿವಾಕರ ದಾಸ್ ನೇರ್ಲಾಜೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ಸ್ವಾಗತ ಸಮಿತಿ ಸಹ ಸಂಚಾಲಕ ಅನಿಲ್ ತೆಂಕಿಲ, ವೆಂಕಟ್ರಮಣ ಕಡಬ, ಸ್ವಾಗತ ಸಮಿತಿ ಕಾರ್ಯದರ್ಶಿ ಮನೀಶ್ ಕುಲಾಲ್, ಪ್ರೇಮ್‌ರಾಜ್  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್ಥಿಕ ಸಮಿತಿ ಸಹಸಂಚಾಲಕ ಪ್ರವೀಣ್ ಭಂಡಾರಿ, ಸಂಚಾಲಕ ಗಣೇಶ್‌ಚಂದ್ರ ಭಟ್ ಮಕರಂದ, ಹೊರೆಕಾಣಿಕೆ ಸಮಿತಿ ಸಂಚಾಲಕ ಅನಿಲ್ ಕಣ್ಣಾರ್ನೂಜಿ, ಸ್ವಯಂ ಸೇವಕ ಸಮಿತಿ ಸಹಸಂಚಾಲಕ ರಾಜೇಶ್ ಕರವೀರ, ಸುನಿಲ್ ಬೋರ್ಕರ್, ಶ್ಯಾಮಪ್ರಸಾದ್, ಹರೀಶ್ ಮರುವಾಳ, ಸದಾಶಿವ ಶೆಟ್ಟಿ ಪಟ್ಟೆ  ಸ್ವಾಮೀಜಿಗಳನ್ನು ಗೌರವಿಸಿದರು. ವಿಜಯಶ್ರೀ ಮುಳಿಯ ಪ್ರಾರ್ಥಿಸಿದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಹ ಸಂಚಾಲಕ ಉಮೇಶ್ ಕೋಡಿಬೈಲು ಸ್ವಾಗತಿಸಿ, ಇನ್ನೋರ್ವ ಸಹಸಂಚಾಲಕ ರವಿ ಕುಮಾರ್ ರೈ ಕೆದಂಬಾಡಿ ಮಠ ವಂದಿಸಿದರು. ವಾಹಿನಿಯಲ್ಲಿ ಉದ್ಘೋಷಕರಾಗಿರುವ ಪ್ರದೀಪ್ ಬಡೆಕ್ಕಿಲ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ದೇವರ ಪ್ರತಿಷ್ಠೆ ನಡೆಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಮತ್ತು ನಂತರ ವಿಜಯಶ್ರೀ ಮುಳಿಯ ಅವರ ತಂಡದಿಂದ ಸಂಧ್ಯಾ ಗೀತಂ ಕಾರ್ಯಕ್ರಮ ನಡೆಯಿತು. ಬಾಲಕೃಷ್ಣ ನೆಟ್ಟಾರು ಹಾಡಿದರು. ಗಿರೀಶ್ ಪೆರ್ಲ, ಶಿವಪ್ರಸಾದ್ ಕಾಸರಗೋಡು, ಸತ್ಯನಾರಾಯಣ, ಸಂತೋಷ್ ವಿಟ್ಲ ಹಿನ್ನೆಲೆ ಸಂಗೀತ ನೀಡಿದರು. ಶೋಭಾಯಾತ್ರೆಯಲ್ಲಿ ಬಂದ ಭಕ್ತರಿಗೆ ಸಭಾಂಗಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಪುರ ಪ್ರವೇಶ; ವೈಭವದ ಮೆರವಣಿಗೆ,

ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ ದೇವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಇತಿಹಾಸ ಪ್ರಸಿದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನ. 30ರಂದು ಅತ್ಯಂತ ವೈಭವದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿ ನ.29ರ ಸಂಜೆ ಸಾವಿರಾರು ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ತ್ರಿನೇತ್ರ ಮಂಟಪಕ್ಕೆ ಸ್ವಾಗತಿಸಲಾಯಿತು.

ಸಂಜೆ ಬೊಳುವಾರಿನಲ್ಲಿ ಸರ್ವವಾದ್ಯಗಳ ಘೋಷದೊಂದಿಗೆ ಮಹಿಳೆಯರು ಕಲಶ ಹಿಡಿದು ವಿವಿಧ ಭಜನಾ ತಂಡಗಳು ಕುಣಿತ ಭಜನೆಯೊಂದಿಗೆ ಶ್ರೀನಿವಾಸ ದೇವರನ್ನು ಸ್ವಾಗತಿಸಿದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಕರ್ಪೂರ ಬೆಳಗಿದ ತೆಂಗಿನ ಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭ ಸುಬ್ರಹ್ಮಣ್ಯ ಬಳ್ಳಕುರಾಯ, ಸಮಿತಿ  ಅಧ್ಯಕ್ಷ ನರಸಿಂಹಪ್ರಸಾದ್ ಸಹಿತ ಪದಾಧಿಕಾರಿಗಳು ತೆಂಗಿನ ಕಾಯಿ ಒಡೆದರು. ಚೆಂಡೆಕುಣಿತ, ನೃತ್ಯ ಭಜನೆ ತಂಡದೊಂದಿಗೆ, ಕೇಸರಿ ಶಲ್ಯ ಧರಿಸಿದ ಮಹಿಳೆಯರು ಕಲಶವನ್ನು ಹಿಡಿದು ಮೆರವಣಿಯುದ್ದಕ್ಕೂ ಪುಷ್ಪಾರ್ಚಣೆ ಮಾಡುವ ಮೂಲಕ ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ, ಪ್ರಧಾನ ಅಂಚೆಕಚೇರಿ ಮೂಲಕ ಬರಮಾಡಿಕೊಳ್ಳಲಾಯಿತು.

ಶ್ರೀನಿವಾಸ ಕಲ್ಯಾಣೋತ್ಸವದ ಸಭಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ನರಸಿಂಹಪ್ರಸಾದ್, ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಮನೀಶ್ ಕುಲಾಲ್, ಅನಿಲ್ ತೆಂಕಿಲ, ಪ್ರವೀಣ್ ಭಂಡಾರಿ, ಗಣೇಶ್ ಮಕರಂದ ಸಹಿತ ಪದಾಧಿಕಾರಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರಿರುವ ಪಲ್ಲಕಿಯನ್ನು ತಾವೆ ಹೆಗಲಮೇರಿಸಿ ಪ್ರಧಾನ ವೇದಿಕೆಗೆ ತಂದು ಅರ್ಚಕರಿಗೆ ಅರ್ಪಿಸಿದರು. ವಿಶಾಲವಾದ ತ್ರಿನೇತ್ರ ಮಂಟಪದಲ್ಲಿ ಸುಂದರ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಶ್ರೀ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು. ಈ ಸಂದರ್ಭ ವೆಂಕಟರಮಣ ಗೋವಿಂದ.. ಗೋವಿಂದಾ.. ಶ್ರೀನಿವಾಸ ಗೋವಿಂದ.. ಸ್ಮರಣೆಯಲ್ಲಿ ಭಕ್ತರು ಮುಳುಗಿದರು. ಶ್ರೀನಿವಾಸನನ್ನು ಕೊಂಡಾಡುವ ಭಕ್ತಿಗೀತೆ, ಭಜನೆ, ಮಂತ್ರಗಳು ಎಲ್ಲೆಡೆ ಮೊಳಗಿದವು. ಶ್ರೀನಿವಾಸ ದೇವರ ಪ್ರತಿಷ್ಠೆಗೂ ಮುಂದೆ ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಶ್ರೀನಿವಾಸ ದೇವರ ಪುರಪ್ರವೇಶ ಸಂದರ್ಭ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು ಪೂವಪ್ಪ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವ ಸಲಹೆಗಾರರಾದ ಶಶಾಂಕ ಕೊಟೇಚಾ, ಚಂದಪ್ಪ ಮೂಲ್ಯ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಡಾ. ಸುರೇಶ್ ಪುತ್ತೂರಾಯ, ಶ್ರೀಕೃಷ್ಣ ಉಪಾಧ್ಯಾಯ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಸುನಿಲ್ ಬೋರ್ಕರ್, ಕುಂಟಾರು ಗುರು ತಂತ್ರಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮೇ 7ರಂದು ಶೃಂಗೇರಿ ಜಗದ್ಗುರುಗಳು ಪುತ್ತೂರಿಗೆ | ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ – ಜವಾಬ್ದಾರಿ ಹಂಚಿಕೆ

ಪುತ್ತೂರು: ಮೇ 7ರಂದು ನಗರದ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿರುವ ಶೃಂಗೇರಿ…