ಬೆಂಗಳೂರು: ಮಹಿಳಾ ಪತ್ರಕರ್ತೆಯರ ವೃತ್ತಿಪರ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಮಾಧ್ಯಮ ಅಕಾಡೆಮಿಯು ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಸಿ.ಎಸ್.ಆರ್ ಕಾರ್ಯಕ್ರಮದ ಸಹಯೋಗದಲ್ಲಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕಾಗಿ ಅರ್ಹ ಮಹಿಳಾ ಪತ್ರಕರ್ತೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಾರ್ಚ್ 25ರಿಂದ 27ರವರೆಗೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಮೂರು ದಿನಗಳ ವಸತಿಯುತ ತರಬೇತಿ ಶಿಬಿರ ನಡೆಯಲಿದೆ. ಈ ತರಬೇತಿಯಲ್ಲಿ ಮಹಿಳಾ ಪತ್ರಕರ್ತೆಯರಿಗೆ ಡಿಜಿಟಲ್ ಮಾಧ್ಯಮ, ಕೃತಕ ಬುದ್ಧಿಮತ್ತೆಯ ಬಳಕೆ, ಸಾಫ್ಟ್ ಸ್ಕಿಲ್ ಅಭಿವೃದ್ಧಿ ಹಾಗೂ ನಾಯಕತ್ವ ತರಬೇತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಣಿತರಿಂದ ಮಾರ್ಗದರ್ಶನ ನೀಡಲಾಗುತ್ತದೆ.
ತರಬೇತಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ನಡೆಯಲಿದ್ದು, ಇದು ಮೂರು ದಿನಗಳ ವಸತಿಯುತ ತರಬೇತಿ ಆಗಿರುತ್ತದೆ. ಭಾಗವಹಿಸುವವರಿಗೆ ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮಹಿಳಾ ಪತ್ರಕರ್ತೆಯರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಜೊತೆಗೆ ಕನಿಷ್ಠ ಐದು ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಮಾಧ್ಯಮ ಅಕಾಡೆಮಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಗೂಗಲ್ ಫಾರ್ಮ್ https://forms.gle/tozr4GxUQibDHBvk9 ಮೂಲಕ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 10, 2026 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವ ವೇಳೆ ಇತ್ತೀಚಿನ ಭಾವಚಿತ್ರ, ವಯಸ್ಸಿನ ದಾಖಲೆ ಪ್ರಮಾಣಪತ್ರ, ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರ ಅಥವಾ ಅಧಿಕೃತ ಗುರುತಿನ ಚೀಟಿ, ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪಟ್ಟಿಯಲ್ಲಿರುವುದನ್ನು ದೃಢೀಕರಿಸುವ ದಾಖಲೆ ಹಾಗೂ ಕನಿಷ್ಠ ಐದು ವರ್ಷಗಳ ಸೇವಾ ಅನುಭವದ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.























