ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (UGCET-2026) ಹಾಗೂ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ ಸ್ನಾತಕೋತ್ತರ (PGNEET-2026) ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿಯನ್ನು ಪ್ರಕಟಿಸಿದೆ. ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿನ ಕೆಲ ದಿನಾಂಕಗಳನ್ನು ವಿಸ್ತರಿಸಲಾಗಿದೆ.
UGCET ಮೂಲಕ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಮಾರ್ಚ್ 7ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ಈ ವರ್ಷ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 3.36 ಲಕ್ಷ ಅಭ್ಯರ್ಥಿಗಳು ಈಗಾಗಲೇ ನಿಗದಿತ ಶುಲ್ಕ ಪಾವತಿಸಿದ್ದಾರೆ. ಇನ್ನೂ ಸುಮಾರು 9 ಸಾವಿರ ಮಂದಿ ಶುಲ್ಕ ಪಾವತಿಸಬೇಕಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗಲೆಂದು ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಇನ್ನು PGNEET ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ಮತ್ತು ಕಾಲೇಜಿಗೆ ವರದಿ ಮಾಡುವ ದಿನಾಂಕವನ್ನು ಮೊದಲು ಮಾರ್ಚ್ 5ರವರೆಗೆ ವಿಸ್ತರಿಸಲಾಗಿತ್ತು. ಕೆಲವು ಅಭ್ಯರ್ಥಿಗಳು ಶುಲ್ಕ ಪಾವತಿಸಲು ಹೆಚ್ಚುವರಿ ಸಮಯ ಕೋರಿ ಮನವಿ ಸಲ್ಲಿಸಿದ್ದರಿಂದ ಅವರಿಗೆ ಅದೇ ದಿನ ಸಂಜೆ 4 ಗಂಟೆಯೊಳಗೆ ಶುಲ್ಕ ಪಾವತಿಸಿ, ಸಂಜೆ 5.30ರೊಳಗೆ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯದ ಅಭ್ಯರ್ಥಿಗಳ ಸೀಟುಗಳನ್ನು ನಾಲ್ಕನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡುವಂತೆ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.























