ಪುತ್ತೂರು: ಬನ್ನೂರು ಅಲುಂಬುಡದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆರಂಭ 2026 ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಭಾರತ ಜಗತ್ತಿನಲ್ಲಿ ಬೆಳೆಯುತ್ತಿರುವ ರಾಷ್ಟ್ರ. ವಿಶೇಷವಾಗಿ ಮಾನವ ಸಂಪನ್ಮೂಲದ ಕ್ರೂಡಿಕರಣಕ್ಕೆ ನಾವೆಲ್ಲ ಮಾಡುತ್ತಿರುವ ಪ್ರಯತ್ನ. ಅದಕ್ಕೆ ನಿಜವಾಗಿ ವ್ಯಕ್ತಿತ್ವ ವಿಕಸನ ಆಗಬೇಕು. ಅವರ ಶಕ್ತಿಯನ್ನು ಸಂಚಲನ ಮಾಡುವ ಮಾನವ ಸಂಪನ್ಮೂಲದ ಕ್ರೋಢೀಕರಣ ಆಗಬೇಕು. ಅದಕ್ಕಾಗಿ ಯುವ ಪೀಳಿಗೆಗೆ ವ್ಯಕ್ತಿತ್ವವನ್ನು ಸಾಮಾಜಿಕ ಶಕ್ತಿಯಾಗಿ ಪರಿವರ್ತನೆ ಮಾಡುವ ಪ್ರಯತ್ನ ವಿದ್ಯಾಕ್ಷೇತ್ರದಲ್ಲಿ ಆಗುತ್ತಿದೆ. ಇಂತಹ ಅದ್ಭುತ ಕಾರ್ಯಕ್ರಮ ಪುತ್ತೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಆಗುತ್ತಿದೆ. ಎ.ವಿ ನಾರಾಯಣ, ವೆಂಕಟ್ರಮಣ ಗೌಡ ಅವರ ಕುಟುಂಬದವರು ಇವತ್ತು ಅದನ್ನು ಬೆಳೆಸುತ್ತಿರುವುದು ಮತ್ತು ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುತ್ತಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದವರು ಹೇಳಿದರು.
ಕನಸು ನುಚ್ಚುನೂರಾದ ಬಳಿಕ, ಹೊಸ ಕನಸನ್ನು ಕಟ್ಟಿಕೊಳ್ತಾನೆಯೋ, ಆ ಕನಸನ್ನು ನನಸು ಮಾಡಲು ಹೋರಾಡ್ತಾನೆಯೋ ಅವನು ಶಕ್ತಿವಂತ. ವ್ಯಕ್ತಿ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡಬೇಕು. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಜಯ ಸಾಧಿಸಿದಾಗಲೇ ಆತ ವಿದ್ಯಾವಂತ ಅನಿಸಿಕೊಳ್ಳುತ್ತಾನೆ ಎಂದರು.
ಇಂದು ಎಲ್ಲಿ ಹೋದರೂ ಇಂಗ್ಲೀಷ್ ಮೀಡಿಯಂ. ಆದರೆ ಇಂಗ್ಲೀಷ್ ಜಾಗತಿಕ ಭಾಷೆಯಲ್ಲ. ಅನ್ನ ಕೊಡುವ ಭಾಷೆಯಾಗಿ ಪರಿವರ್ತನೆ ಆಗಿದೆ. ಆದ್ದರಿಂದ ಕನ್ನಡ, ತುಳು ಭಾಷೆಯನ್ನು ಬಿಡಬೇಡಿ. ಸ್ವದೇಶಿ ಚಿಂತನೆಗೆ ಒತ್ತು ನೀಡಿ. ಕನ್ನಡ, ತುಳು ಭಾಷೆಯ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರ ಅಧಃಪತನವಾದರೆ ಸಮಾಜ ಮುಂದುವರಿಯುವುದಿಲ್ಲ. ವಿದ್ಯೆ ಅಂದರೆ ಮಾರಾಟದ ವಸ್ತುವಾಗಿದೆ. ವಿದ್ಯಾಸಂಸ್ಥೆಯ ಮುಖ್ಯಸ್ಥನ ಗುರಿ ಹಣ ಮಾಡುವುದೇ ಆಗಿದ್ದರೆ ಆತ ಸಮಾಜಕ್ಕೆ ದ್ರೋಹ ಬಗೆದಂತೆ. ಶಿಸ್ತಿಗೆ ಆದ್ಯತೆ ನೀಡುವ ವಿದ್ಯಾಸಂಸ್ಥೆ ಸಮಾಜದಲ್ಲಿ ಗುರುತಿಸಿಕೊಳ್ಳುತ್ತದೆ ಎಂದ ಡಿ.ವಿ.ಸದಾನಂದ ಗೌಡ ಅವರು ಇದಕ್ಕೆಲ್ಲ ವಿರುದ್ಧವಾಗಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.
ಹಳ್ಳಿಯಿಂದ ಡೆಲ್ಲಿವರೆಗೆ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದೇನೆ. ನಾನೋರ್ವ ಸಂತೃಪ್ತ ರಾಜಕಾರಣಿ. ಇನ್ಯಾವ ಆಸೆ ಆಕಾಂಕ್ಷೆಗಳು ಇಲ್ಲ. ಸಮಾಜಸೇವೆಯೊಂದೇ ನನ್ನ ಗುರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಹಣ ಮಾಡಲು ಈ ಸಂಸ್ಥೆ ಕಟ್ಟಿದ್ದೇ ಅಲ್ಲ. ಕನ್ನಡ ಹಾಗೂ ತುಳು ಭಾಷೆಯ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬೇಕೆಂಬ ಉದ್ದೇಶದಿಂದ ಸಂಸ್ಥೆ ಸ್ಥಾಪಿಸಿದ್ದೇವೆ ಎಂದ ಅವರು, ರಾಜ್ಯಸಭಾ ಸದಸ್ಯತ್ವ ಅವರಿಗೆ ಸಿಗಲಿ. ಶ್ರೀ ಮಹಾಲಿಂಗೇಶ್ವರ ದೇವರು ಸದಾ ಅವರ ಬಾಯಿಯಲ್ಲಿ ನೆಲೆಸಲಿ ಎಂದರು.
ಉಮೇಶ್ ಮಳುವೇಲು, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಬಲ್ಯ, ಪಿಟಿಎ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ್, ಎವಿಜಿ ವಿದ್ಯಾಸಂಸ್ಥೆ ಸಣ್ಣದಿರಬಹುದ. ಆದರೆ ಇಲ್ಲಿ ನೀಡಿದ ಸೌಲಭ್ಯಗಳು ಯಾವ ಸಂಸ್ಥೆಗೂ ಕಡಿಮೆಯಿಲ್ಲ. ಮುಂದೆ ಈಜುಕೊಳ ನಿರ್ಮಿಸಬೇಕೆಂಬ ಕನಸಿದೆ. ಇದೀಗ 7 ಹಾಗೂ 8ನೇ ತರಗತಿಯನ್ನು ಆರಂಭಿಸುತ್ತಿದ್ದು, 9 ಹಾಗೂ 10ನೇ ತರಗತಿ ಮುಂದಿನ ವರ್ಷದಲ್ಲಿ ಕ್ರಮವಾಗಿ ಆರಂಭವಾಗಲಿದೆ ಎಂದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿ ವಿಖ್ಯಾತ್ ಸಂವಿಧಾನದ ಪೀಠಿಕೆ ಓದಿದರು. ಸ್ವಾಗತಿಸಿದರು. ಪ್ರಾಂಶುಪಾಲ ಅಮರನಾಥ ಬಿ.ಪಿ. ವಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.























