ಸಂಸ್ಕೃತಿಯ ಬೇರು ಭಾಷೆ. ತಾಯಿನುಡಿ ಶ್ರೇಷ್ಠ. ಸ್ವಭಾಷೆಯಲ್ಲಿ ಮಾತನಾಡಿದಾಗ ಮಾತ್ರ ಭಾವನಾತ್ಮಕವಾಗಿ ಸ್ಪಂದಿಸಲು ಸಾಧ್ಯ. ಯಾವುದೇ ಭಾಷೆಯಲ್ಲಿ ವ್ಯವಹಾರ ಮಾಡಿದರೂ ಮಾತೃ ಭಾಷೆಯನ್ನು ಮರೆಯಬಾರದು. ಕನ್ನಡ ಜಗತ್ತಿ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದ್ದು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ಕನ್ನಡ ಸಾಹಿತ್ಯವನ್ನು ಓದುವ ಮೂಲಕ ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳಬೇಕಾಗಿದೆ ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಹೇಳಿದರು.
ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ಸ್ವಭಾಷಾ ಕನ್ನಡ ಸಂಘದ ಉದ್ಘಾಟನಾ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕವಯಿತ್ರಿ ಸಂಧ್ಯಾ ಗೀತ ಬಾಯಾರು ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ಅತಿಥಿಯಾಗಿದ್ದ ಹಿರಿಯ ಗಝಲ್ ಕವಿ ಡಾ. ಸುರೇಶ ನೆಗಳಗುಳಿ ಮಾತನಾಡಿ, ಕನ್ನಡ ಭಾಷೆಯಲ್ಲಿಆಂಗ್ಲ ಭಾಷೆಯ ಬಳಕೆ ಕಡಿಮೆ ಮಾಡಬೇಕು. ದಿನನಿತ್ಯದ ವ್ಯವಹಾರದಲ್ಲಿ ಅನಗತ್ಯವಾಗಿ ಆಂಗ್ಲ ಪದ ಬಳಕೆಯಾಗುತ್ತಿದ್ದು ಭಾಷಾ ಶುದ್ಧತೆಯ ಕಡೆಗೆ ಗಮನ ಹರಿಸಬೇಕೆಂದರು. ಈ ಸಂದರ್ಭದಲ್ಲಿ ಅವರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಶಾಲಾ ಸಂಚಾಲಕರ ಮೂಲಕ ಹಸ್ತಾಂತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಗುರು ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ, ಶಾಲಾ ಸಂಚಾಲಕ ಈಶ್ವರ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಭಾಷಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದರು.
ಆಡಳಿತಾಧಿಕಾರಿ ಮಧುರಾ ಈಶ್ವರ್ ಪ್ರಸಾದ್ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಗಳನ್ನು ಘೋಷಣೆ ಮಾಡಿ, ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸರಸ್ವತಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸ್ವರಚಿತ ಕವನ ವಾಚಿಸಿದರು. ಶಿಕ್ಷಕಿಯರು ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದರು.






















