ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ಮುಖ್ಯ ರಸ್ತೆಗಳ ಸೇತುವೆಗಳ ಎರಡೂ ಬದಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು
ಪೊಳಲಿ-ಅದ್ದೂರು ರಾಜ್ಯ ಹೆದ್ದಾರಿ ಸೇತುವೆಯನ್ನು ಬಲಪಡಿಸುವ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದ ಬಳಿಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಸೇತುವೆಯ 500 ಮೀಟರ್ ವ್ಯಾಪ್ತಿಯಲ್ಲಿ ಮರಳನ್ನು ತೆಗೆಯಬಾರದೆಂಬ ನಿಯಮ ಇದೆ. ಆದರೂ ಸೇತುವೆಗಳ ಆಸುಪಾಸಿನಲ್ಲಿ ನದಿಯಲ್ಲಿ ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ಸೇತುವೆಗಳು ದುರ್ಬಲವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ನದಿಯಲ್ಲಿ ಮರಳುಗಾರಿಕೆ ನಡೆಸಿದ್ದರಿಂದ ಕೆಲವೆಡೆ ಸೇತುವೆಗಳು ದುರ್ಬಲಗೊಂಡಿವೆ. ಈ ರೀತಿ ಅಕ್ರಮವಾಗಿ ನದಿಯಿಂದ ಮರಳು ತೆಗೆಯುವುದನ್ನು ತಡೆಯಲು ಎಲ್ಲಾ ಪ್ರಮುಖ ಸೇತುವೆಗಳ ಎರಡು ಬದಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರವಾಗಿ ನಿಗಾ ವಹಿಸಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.
‘ಅದ್ದೂರು ಸೇತುವೆ ಬಲಪಡಿಸುವ ಕಾಮಗಾರಿಯನ್ನು ಸುಮಾರು ₹ 6.10 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಇಲ್ಲಿ ಹೊಸ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.