ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪುರ ನಿವಾಸಿ ಅಮೀರ್ ಅಹ್ಮದ್ (48) ಮತ್ತು ಈತನ ಸಹಚರ ಮತ್ತಿಕೆರೆ ನಿವಾಸಿ ಸೈಯದ್ ಅಮೀನ್ ಅಹ್ಮದ್ (48) ಬಂಧಿತರು.
ಆರೋಪಿಗಳಿಂದ 1.13 ಕೋಟಿ ರೂ. ಮೌಲ್ಯದ 759 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಗಳು ಏಪ್ರಿಲ್‌ನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಈ ಸಂಬಂಧ ಸಚಿವರ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಶಿವಾಜಿನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ ರಸ್ತೆ ಯಲ್ಲಿ ಜಮೀರ್ ಅಹ್ಮದ್‌ಗೆ ಸೇರಿದ ಮನೆಯಿದ್ದು, ಅದರಲ್ಲಿ ತಾಯಿ ಸೊಗ್ರಾ ಖಾನಮ್ ಕೂಡ ವಾಸವಾಗಿದ್ದಾರೆ. ಈ ಮಧ್ಯೆ ಆರೋಪಿಗಳ ಪೈಕಿ ಅಮೀರ್‌ಅಹ್ಮದ್, ಸಚಿವ ಜಮೀರ್‌ಅಹ್ಮದ್ ಅವರ ದೂರದ ಸಂಬಂಧಿ ಯಾಗಿದ್ದರಿಂದ ಆಗಾಗ್ಗೆ ಸೊಗ್ರಾ ಖಾನಮ್ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದ. ದೂರದ ಸಂಬಂಧಿಯಾಗಿದ್ದರಿಂದ ಮನೆಯ ಸದಸ್ಯರು ಸಂಪರ‍್ಣವಾಗಿ ನಂಬಿದ್ದು, ಎಲ್ಲಾ ಕೋಣೆಗಳಿಗೆ ಹೋಗಿ ಬರುತ್ತಿದ್ದ. ಈ ವೇಳೆಯೇ ಕೃತ್ಯ ಎಸಗಿರುವ ಸಾಧ್ಯ ತೆಯಿದೆ.. ಈ ಸಂಬಂಧ ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಲಕೇಶಿನಗರ ಉಪವಿಭಾಗದ ಎಸಿಪಿ ಸಿ.ಆರ್. ಗೀತಾ, ಶಿವಾಜಿನಗರ ಪಿಐ ಡಿ.ಸಿ.ಮಂಜು ಮತ್ತು ತಂಡ ಕಾರ‍್ಯಾಚರಣೆ ನಡೆಸಿದೆ.
ಈ ಮಧ್ಯೆ ಆರೋಪಿ ಅಮೀರ್ ಅಹ್ಮದ್, ಮೆಕ್ಕಾಗೆ ಹೋಗಲು 5 ಲಕ್ಷ ರೂ. ಕೊಡುವಂತೆ ಕೇಳಿದ್ದಾನೆ. ಆಗ ಜಮೀರ್ ತಾಯಿ ಸೊಗ್ರಾ ಖಾನಮ್ ಕೊಟ್ಟಿಲ್ಲ. ಈ ವೇಳೆ ಆತ ಬೇಸರಗೊಂಡು ವಾಗ್ವಾದ ನಡೆಸಿ ಮನೆಯಿಂದ ತೆರಳಿದ್ದಾನೆ. ಆ ನಂತರವೂ ಒಂದೆರಡು ಬಾರಿ ಮನೆಗೆ ಬಂದು ಹೋಗಿದ್ದ.
ಈ ವೇಳೆ ಆರೋಪಿ, ಮನೆಯ ಬೀರುವಿನಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಮತ್ತೂಂದೆಡೆ ಸೊಗ್ರಾ ಖಾನಮ್ ಬೀರು ನೋಡಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಗೊತ್ತಾಗಿದೆ. ನಂತರ ಮನೆ ಕೆಲಸಗಾರರು ವಿಚಾರಣೆ ನಡೆಸಲಾಗಿದೆ. ಯಾರು ತೆಗೆದುಕೊಂಡಿಲ್ಲ ಎಂದಿದ್ದಾರೆ. ಬಳಿಕ ಆರೋಪಿಗೆ ಕರೆ ಮಾಡಿದಾಗ ಪ್ರತಿಕ್ರಿಯೆ ಬಂದಿಲ್ಲ. ನಂತರ ಅನುಮಾನಗೊಂಡು ಮನೆಗೆ ಕರೆಸಿ ವಿಚಾರಿಸಿದಾಗ ಚಿನ್ನ ತೆಗೆದುಕೊಂಡು ಹೋಗಿದ್ದು, ಫ್ರೆಜರ್‌ಟೌನ್‌ನಲ್ಲಿರುವ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದಾಗಿ ಹೇಳಿಕೆ ನೀಡಿದ್ದು, ಬ್ಯಾಂಕ್ ನಲ್ಲಿ ವಿಚಾರಿಸಿದಾಗ ಯಾವುದೇ ಚಿನ್ನಾಭರಣ ಅಡಮಾನ ಇರಿಸಲಿಲ್ಲ ಎಂಬುದು ಗೊತ್ತಾಗಿದೆ.
ಆ ಬಳಿಕ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದಾಗ, ಸ್ನೇಹಿತ ಸೈಯದ್ ಅಮೀನ್ ಅಹ್ಮದ್‌ಗೆ ಕೊಟ್ಟಿದ್ದು, ಆತ ಯಾವುದೋ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.























