tamanvi
ಕರಾವಳಿ

ನದಿಗಳಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ನೇತ್ರಾವತಿ, ಕುಮಾರಧಾರ, ಫಲ್ಗುಣಿ, ಸ್ವರ್ಣಾ, ಸೀತಾ ಸೇರಿದಂತೆ ಪ್ರಮುಖ ನದಿಗಳಿಗೆ ಅಪಾಯಕಾರಿ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.

ಆ.17ರಂದು ವಿಧಾನ ಪರಿಷತ್ತಿನಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 46(64)ಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ನೀಡಿದ ಉತ್ತರದಲ್ಲಿ ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ವಿವಿಧ ಕ್ರಮಗಳನ್ನು ವಿವರಿಸಲಾಗಿದೆ. ಆದರೆ, ನದಿಗಳಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಸರ್ಕಾರ ನೇರವಾಗಿ ಕೈಗೊಂಡಿರುವ ಕ್ರಮಗಳ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ. ಬದಲಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೈಗೊಂಡಿರುವ ಕ್ರಮಗಳನ್ನಷ್ಟೇ ಉಲ್ಲೇಖಿಸಲಾಗಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುಪುರ (ಫಲ್ಗುಣಿ), ನಂದಿನಿ ಹಾಗೂ ನೇತ್ರಾವತಿ ನದಿಗಳಿಗೆ ಸಂಸ್ಕರಿಸದ ಒಳಚರಂಡಿ ತ್ಯಾಜ್ಯ ಸೇರುತ್ತಿರುವ ಕುರಿತು ದೂರುಗಳ ಹಿನ್ನೆಲೆಯಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆ. ಪಾಲಿಕೆಯ ಹಿಂದಿನ ಹಾಗೂ ಹಾಲಿ ಆಯುಕ್ತರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸರ್ಕಾರದ ಉತ್ತರದಲ್ಲಿ ತಿಳಿಸಲಾಗಿದೆ.

ಉಡುಪಿ ಜಿಲ್ಲೆಯ ಕೊಲ್ಲೂರಿನ ಸೌಪರ್ಣಿಕ ನದಿಗೆ ಸಂಸ್ಕರಿಸದ ತ್ಯಾಜ್ಯ ಹಾಗೂ ಹೋಟೆಲ್, ಲಾಡ್ಜ್ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಕಲುಷಿತ ನೀರು ಸೇರುತ್ತಿರುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳ ಪರಿಶೀಲನೆ ಹಾಗೂ ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸೌಪರ್ಣಿಕ, ನೇತ್ರಾವತಿ, ಕುಮಾರಧಾರ ಹಾಗೂ ಫಲ್ಗುಣಿ ನದಿಗಳ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ಪರೀಕ್ಷಿಸಲಾಗುತ್ತಿದ್ದು, ಜುಲೈ ತಿಂಗಳ ವರದಿ ಪ್ರಕಾರ ಈ ನದಿಗಳ ನೀರು ‘ಬಿ’ ವರ್ಗಕ್ಕೆ ಸೇರಿದೆ ಎಂದು ಸರ್ಕಾರ ತಿಳಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮಧ್ಯ ಸುರತ್ಕಲ್ ರೊಚ್ಚು ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸದ ನೀರು ನದಿ ಮೂಲಗಳಿಗೆ ಬಿಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆ ವಿರುದ್ಧ ರೂ.1,986.695 ಲಕ್ಷ ಪರಿಸರ ಪರಿಹಾರ ವಿಧಿಸಲು ಶಿಫಾರಸು ಮಾಡಲಾಗಿದೆ. ಶ್ರೀನಿವಾಸ ಕಾಲೇಜು, ಮುಕ್ಕ ವಿರುದ್ಧವೂ ರೂ.72.90 ಲಕ್ಷ ಪರಿಸರ ಪರಿಹಾರ ವಿಧಿಸಲು ಶಿಫಾರಸು ಮಾಡಲಾಗಿದೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಸಂಸ್ಕರಿಸದ ಒಳಚರಂಡಿ ತ್ಯಾಜ್ಯ ಸೇರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿ ನೋಟಿಸ್‌ಗಳನ್ನು ಜಾರಿ ಮಾಡಿದೆ. ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯಿದೆ, 1974ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಪರಿಸರ ಪರಿಹಾರ ವಿಧಿಸಲು ಶಿಫಾರಸು ಮಾಡಲಾಗಿದೆ.

ಬೈಕಂಪಾಡಿ ಪ್ರದೇಶದ ಕೈಗಾರಿಕೆಗಳಿಂದ ಫಲ್ಗುಣಿ ನದಿಗೆ ಮಾಲಿನ್ಯ ಉಂಟಾಗುತ್ತಿರುವ ಕುರಿತು ಕ್ರಮ ಕೈಗೊಳ್ಳಲಾಗಿದ್ದು, 2024-25ನೇ ಸಾಲಿನಲ್ಲಿ 6 ಹಾಗೂ 2025-26ನೇ ಸಾಲಿನಲ್ಲಿ 7 ಕೈಗಾರಿಕೆಗಳಿಗೆ ಮುಚ್ಚುವ ಆದೇಶ ನೀಡಲಾಗಿದೆ ಎಂದು ಸರ್ಕಾರದ ಉತ್ತರದಲ್ಲಿ ತಿಳಿಸಲಾಗಿದೆ.

ಆದರೆ, ನದಿಗಳಿಗೆ ತ್ಯಾಜ್ಯ ಎಸೆಯುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಸಂಬಂಧಿಸಿದ ಇಲಾಖೆ ಅಥವಾ ಸರ್ಕಾರ ನೇರವಾಗಿ ಕೈಗೊಂಡಿರುವ ಕ್ರಮಗಳ ಕುರಿತು ಸಮರ್ಪಕ ಮಾಹಿತಿ ಇಲ್ಲದಿರುವುದು ಗಂಭೀರ ವಿಚಾರವಾಗಿದೆ. ನದಿಗಳ ಮಾಲಿನ್ಯ ತಡೆಗಟ್ಟಲು ಸರ್ಕಾರ ಕೂಡಲೇ ಅಗತ್ಯ ಸುತ್ತೋಲೆ ಹೊರಡಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

ಕಾಳುಮೆಣಸು ಬೆಳೆಗಾರರಿಗೆ ಗುಡ್‌ನ್ಯೂಸ್; ವಿವಿಧ ಯೋಜನೆಗಳಡಿ ಆರ್ಥಿಕ ನೆರವು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಆರ್ಥಿಕ ನೆರವು…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…