ಕರಾವಳಿ

ದ.ಕ.: ಬೆಳೆ ವಿಮೆ ಜಮೆ ಆರಂಭ; ಕಡಿಮೆ ಮೊತ್ತಕ್ಕೆ ರೈತರ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಹಾಗೂ ಕಾಳುಮೆಣಸು ಬೆಳೆ ವಿಮೆ ಮೊತ್ತಕ್ಕಾಗಿ ಕಾಯುತ್ತಿದ್ದ ರೈತರ ಬ್ಯಾಂಕ್ ಖಾತೆಗಳಿಗೆ ಅ.2ರಿಂದ ಹಣ ಜಮೆಯಾಗುವ ಪ್ರಕ್ರಿಯೆ ಆರಂಭವಾಗಿದೆ. ಈ ಬಾರಿ ಸಾಮಾನ್ಯಕ್ಕಿಂತ ಮುಂಚಿತವಾಗಿ ವಿಮೆ ಮೊತ್ತ ಬಿಡುಗಡೆಯಾಗುತ್ತಿರುವುದು ರೈತರಿಗೆ ಕೊಂಚ ನಿರಾಳತೆ ತಂದಿದ್ದರೂ, ಖಾತೆಗೆ ಜಮೆಯಾಗುತ್ತಿರುವ ಮೊತ್ತ ನಿರೀಕ್ಷೆಗಿಂತ ಕಡಿಮೆಯಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

gl

ಸಾಮಾನ್ಯವಾಗಿ ಅಕ್ಟೋಬರ್ ಕೊನೆ, ನವೆಂಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಬೆಳೆ ವಿಮೆ ಮೊತ್ತ ರೈತರ ಖಾತೆಗಳಿಗೆ ಜಮೆಯಾಗುತ್ತಿತ್ತು. ಆದರೆ ಈ ಬಾರಿ ಅ.2ರಿಂದಲೇ ಹಣ ಪಾವತಿ ಪ್ರಕ್ರಿಯೆ ಆರಂಭವಾಗಿದೆ. ಮಳೆ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಕೃಷಿ ನಿರ್ವಹಣಾ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ ರೈತರು ವಿಮೆ ಮೊತ್ತದಿಂದ ಹೆಚ್ಚಿನ ನೆರವು ನಿರೀಕ್ಷಿಸಿದ್ದರು. ಆದರೆ ಕಡಿಮೆ ಮೊತ್ತ ಜಮೆಯಾಗುತ್ತಿರುವುದರಿಂದ ನಿರಾಸೆ ವ್ಯಕ್ತಪಡಿಸಿದ್ದಾರೆ.

‘ಬೆಳೆ ವಿಮೆಗೂ ವಿಮೆ ಮಾಡಿಸುವ ಪರಿಸ್ಥಿತಿ’

“ಬೆಳೆ ವಿಮೆಗೂ ವಿಮೆ ಮಾಡಿಸುವ ಪರಿಸ್ಥಿತಿ ಬಂದಿದೆ” ಎಂಬ ಅಸಮಾಧಾನದ ಮಾತುಗಳು ರೈತರಿಂದ ಕೇಳಿಬರುತ್ತಿವೆ. ಯಾವ ಮಾನದಂಡದ ಆಧಾರದಲ್ಲಿ ವಿಮೆ ಮೊತ್ತ ನಿಗದಿಪಡಿಸಲಾಗಿದೆ? ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೊತ್ತ ಕಡಿಮೆಯಾಗಲು ಕಾರಣವೇನು? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆ ಹಾಗೂ ವಿಮಾ ಸಂಸ್ಥೆ ಸ್ಪಷ್ಟನೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಪ್ರಸ್ತುತ ಜಮೆಯಾಗುತ್ತಿರುವುದು ಮೊದಲ ಹಂತದ ಹಣವೇ ಅಥವಾ ಇದೇ ಅಂತಿಮ ಮೊತ್ತವೇ? ಇನ್ನಷ್ಟು ಹಣ ಜಮೆಯಾಗಲಿದೆಯೇ? ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ರೈತರು ತಿಳಿಸಿದ್ದಾರೆ. ಕಳೆದ ಬಾರಿಯೂ ಹೆಚ್ಚುವರಿ ಮೊತ್ತ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರೂ ಅದು ಈಡೇರಿರಲಿಲ್ಲ ಎಂಬ ಅಳಲು ರೈತರದ್ದಾಗಿದೆ.

ಹಿಂದಿನ ವರ್ಷಗಳಲ್ಲೂ ಕಡಿಮೆ ಮೊತ್ತದ ಬಗ್ಗೆ ಆಕ್ಷೇಪ

ಕಳೆದ ವರ್ಷವೂ ಬೆಳೆ ವಿಮೆ ಮೊತ್ತ ಕಡಿಮೆಯಾಗಿರುವುದಕ್ಕೆ ರೈತರು ಹಾಗೂ ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಮನವಿ ಸಲ್ಲಿಕೆ, ಪ್ರತಿಭಟನೆ ಹಾಗೂ ಅಧಿಕಾರಿಗಳ ಭೇಟಿಯ ಮೂಲಕ ವಿಮೆ ಲೆಕ್ಕಾಚಾರ ಮತ್ತು ಪರಿಹಾರ ಮೊತ್ತವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಾಗಿತ್ತು.

ವಿಮೆ ಪಾವತಿಯಲ್ಲಿ ಪಾರದರ್ಶಕತೆ, ವೈಜ್ಞಾನಿಕ ನಷ್ಟ ನಿರ್ಣಯ ಹಾಗೂ ಬೆಳೆ ನಷ್ಟಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನು ರೈತರು ಮುಂದಿಟ್ಟಿದ್ದರು. ಆದರೂ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ

ರೈತರು ನೀಡಿರುವ ಮಾಹಿತಿಯಂತೆ, ಅಡಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 2018–19ರಲ್ಲಿ ಗರಿಷ್ಠ ₹1.28 ಲಕ್ಷ, 2019–20ರಲ್ಲಿ ₹60 ಸಾವಿರ, 2020–21ರಲ್ಲಿ ₹52 ಸಾವಿರ, 2021–22ರಲ್ಲಿ ₹60 ಸಾವಿರ, 2022–23ರಲ್ಲಿ ₹70 ಸಾವಿರ, 2023–24ರಲ್ಲಿ ₹65 ಸಾವಿರ ಹಾಗೂ 2024–25ರಲ್ಲಿ ₹55 ಸಾವಿರ ವಿಮೆ ಮೊತ್ತ ಜಮೆಯಾಗಿತ್ತು.

ಆದರೆ ಈ ಬಾರಿ ಕೇವಲ ₹30 ಸಾವಿರದಷ್ಟು ಮೊತ್ತ ಜಮೆಯಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹವಾಮಾನ ವೈಪರೀತ್ಯದಿಂದ ಕೃಷಿ ಸಂಕಷ್ಟ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿಮೆ ಮೊತ್ತ ಕಡಿಮೆಯಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ.

ವಿಮಾ ಸಂಸ್ಥೆ ಹಾಗೂ ಸಂಬಂಧಪಟ್ಟ ಇಲಾಖೆ ಪಾವತಿ ಮೊತ್ತದ ವಿವರ ಮತ್ತು ಲೆಕ್ಕಾಚಾರದ ಮಾನದಂಡವನ್ನು ರೈತರಿಗೆ ಸ್ಪಷ್ಟಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮುಂದಿನ ವಾರದ ಕೊನೆಗೆ ಸಂಪೂರ್ಣ ಚಿತ್ರಣ

“ಪ್ರಸ್ತುತ ಬೆಳೆ ವಿಮೆ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇದರ ಸಂಪೂರ್ಣ ಚಿತ್ರಣ ಮುಂದಿನ ವಾರದ ಕೊನೆಗೆ ಸಿಗಲಿದೆ” ಎಂದು ಟಾಟಾ ಎಐಜಿ ವಿಮಾ ಕಂಪನಿಯ ವಿನಯ್ ತಿಳಿಸಿದ್ದಾರೆ.

“ವಿಮಾ ಕಂಪನಿ ನಿಗದಿಪಡಿಸಿದ ಮೊತ್ತವನ್ನು ತೋಟಗಾರಿಕೆ ಇಲಾಖೆ ಮೂಲಕ ಜಮೆ ಮಾಡಲಾಗುತ್ತದೆ. ಉಳಿದಂತೆ ಇಲಾಖೆಗೆ ಯಾವುದೇ ಮಾಹಿತಿ ಸಿಗುವುದಿಲ್ಲ” ಎಂದು ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಇಬ್ರಾಹಿಂ ದೊಡಮನಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts