ಪುತ್ತೂರು: ಸಂಪ್ಯದ ಕೊಲ್ಯ ಭಾಗಕ್ಕೆ ಹೆಚ್ಚುವರಿ ಅನುದಾನದ ಅಗತ್ಯ ಕಾಣುತ್ತಿದೆ. ಹೆಚ್ಚುವರಿ ತಡೆಗೋಡೆ, ಚರಂಡಿ ಕಾಮಗಾರಿ ಹೀಗೆ ಅನೇಕ ಕಾಮಗಾರಿಗಳ ಅಗತ್ಯವಿದೆ. ಇದನ್ನು ಶಾಸಕರ ಮುಂದೆ ಇಡುವ. ಮೆಡಿಕಲ್ ಕಾಲೇಜು, ಪುತ್ತೂರು – ಉಪ್ಪಿನಂಗಡಿ ರಸ್ತೆಯಂತಹ ಹಾರಾಡಿ ಬಳಿಯ ಕಾಮಗಾರಿಯಂತಹ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿರುವಂತಹ ಅಶೋಕ್ ರೈ ಅವರಿಗೆ ಈ ಭಾಗದ ಜನರ ಸಮಸ್ಯೆಗೆ ಇನ್ನೊಂದಷ್ಟು ಅನುದಾನ ನೀಡುವುದು ದೊಡ್ಡ ವಿಷಯವಲ್ಲ. ನಾನು ನಿಮ್ಮೊಂದಿಗಿದ್ದೇನೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಸಂಪ್ಯದ ಕೊಲ್ಯ ಭಾಗದಲ್ಲಿ ಕುಸಿತಗೊಂಡ ಮನೆ ಪ್ರದೇಶಕ್ಕೆ ಭಾನುವಾರ ಸಂಜೆ ಭೇಟಿ ನೀಡಿ, ಮಾತನಾಡಿದರು.

ಜನರಿಗೆ ಸ್ಪಂದನೆ ನೀಡಿ, ಶಾಸಕ ಅಶೋಕ್ ಕುಮಾರ್ ರೈ ಅವರು 2 ಕೋಟಿ ರೂ. ಅನುದಾನ ನೀಡಿ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಮೂಲಕ ಈ ಭಾಗದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ. ಭಾರೀ ಮಳೆಗೆ ಸಮಸ್ಯೆ ಆಗಿದೆ. ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೇ ಸಮಸ್ಯೆ ಉಂಟಾಗಿದೆ. ಮಳೆ ನೀರು ಸರಿಯಾಗಿ ಹರಿದು ಹೋಗಲು ದಾರಿ ಇದ್ದರೆ ಸಮಸ್ಯೆ ಆಗುವುದಿಲ್ಲ ಎಂದರು.
ರಾಜ್ಯದಲ್ಲೇ ನಂ. 1 ಶಾಸಕ ಅಶೋಕ್ ರೈ
ಇಲ್ಲಿನ ವಲಯಾಧ್ಯಕ್ಷ ಗಿರೀಶ್ ರೈ ಅವರು ಸಮಸ್ಯೆಯ ಬಗ್ಗೆ ಗಮನ ಸೆಳೆದು, ಇಲ್ಲಿಗೆ ಬರುವಂತೆ ಮಾಡಿದ್ದಾರೆ. ಬದಲಾಗಿ ರಾಜಕೀಯ ಮಾಡಲು ತಾನು ಬಂದಿಲ್ಲ. ರಾತ್ರಿ ಮಲಗಿದರೆ ನೆಮ್ಮದಿಯಲ್ಲಿ ನಿದ್ದೆ ಮಾಡುವಂತೆ ಆಗಬೇಕು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಶೋಕ್ ರೈ ಅವರು ರಾಜ್ಯದಲ್ಲೇ ನಂ. 1 ಶಾಸಕರು ಎಂದು ಶ್ಲಾಘಿಸಿದರು.
ವಿರೋಧ ಕೆಲಸಗಳಿಗೆ ಆಸ್ಪದ ಬೇಡ
ಸಮಸ್ಯೆಯನ್ನು ಖುದ್ದು ನೋಡಿದ್ದೇನೆ. ಶಾಸಕರು ಕಾರ್ಯಕ್ರಮದ ಒತ್ತಡ ಇರುವುದರಿಂದ ಬರಲು ಸಾಧ್ಯವಾಗಿಲ್ಲ. ಅವರ ಬದಲಾಗಿ ನಾನು ಬಂದಿದ್ದೇನೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ವಿರೋಧ ಪಕ್ಷದವರು ಬರುವ ಸಾಧ್ಯತೆ ಇದೆ. ಕೆಲವೆಡೆ ಹೀಗೆ ಬಂದು – ಶಾಸಕರ ಅಪ್ಪನ ಮನೆಯ ಹಣವೇ ಎಂದು ಪ್ರಶ್ನಿಸಿದ್ದರು. ಹಾಗಾದರೆ ಈ ಹಿಂದೆ ಅವರದ್ದೇ ಸರಕಾರವಿತ್ತು. ಆಗ ಅವರಿಗೆ ಅವರ ಅಪ್ಪನ ಹಣವಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಘಟನೆಗಳಿಗೆ ಆಸ್ಪದ ನೀಡದಿರಿ.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಎರಡೂವರೆ ಸಾವಿರ ಕೋಟಿ ರೂ. ಅನುದಾನ ತಂದಿದ್ದಾರೆ. ಈ ಹಿಂದಿನವರು ಕೋಟಿ ಕೋಟಿ ಅನುದಾನ ತಂದಿದ್ದೇವೆ ಎನ್ನುತ್ತಾರೆ. ಆ ಅನುದಾನ ಎಲ್ಲಿದೆ ಎಂದು ಕೇಳಿದರೆ ಗೊತ್ತಿಲ್ಲ. ಆದರೆ ನಮ್ಮ ಶಾಸಕರ ಅನುದಾನದ ಬಗ್ಗೆ ಕೇಳಿದರೆ ಶ್ವೇತ ಪತ್ರ ಹೊರಡಿಸಲು ಸಿದ್ಧರಿದ್ದೇವೆ ಎಂದರು.
ಹೆಚ್ಚುವರಿ 2 ಕೋಟಿ ರೂ.ಗೆ ಶಾಸಕರಿಗೆ ಮನವಿ: ಗಿರೀಶ್ ರೈ
ವಲಯಾಧ್ಯಕ್ಷ ಗಿರೀಶ್ ರೈ ಮಾತನಾಡಿ, 2 ಕೋಟಿ ರೂ.ನಲ್ಲಿ ಸಾಕಷ್ಟು ಕಾಮಗಾರಿ ನಡೆದಿದೆ. ಇನ್ನು ಮುಕ್ಕಾಲು ಭಾಗದಷ್ಟು ಕಾಮಗಾರಿ ಬಾಕಿ ಇದೆ. ಹಾಗೆಂದು ಮನೆ ಬಿದ್ದು ಹೋಗಿರುವುದಕ್ಕೂ, ನಡೆಯುತ್ತಿರುವ ಕಾಮಗಾರಿಗೂ ಯಾವುದೇ ಸಂಬಂಧ ಇಲ್ಲ. ಮನೆ ಮಾಲಕರು ನಮ್ಮೊಂದಿಗೆ ಇದ್ದಾರೆ. ಮನೆಗೆ ಫೌಂಡೇಶನ್ ಇಲ್ಲದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಹಾಗಾಗಿ ಈ ಭಾಗದಲ್ಲಿ ನಡೆಯುವ ಇನ್ನಷ್ಟು ಕಾಮಗಾರಿಗೆ ಅನುದಾನದ ಅಗತ್ಯ ಇರುವುದರಿಂದ, ಮುಂದಿನ ಸೋಮವಾರ ಸಂಜೆ ಹೊತ್ತಿಗೆ ಶಾಸಕರ ಕಚೇರಿಗೆ ಹೋಗುವವರಿದ್ದೇವೆ. ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿಕೊಂಡರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸಿಕ್ವೇರಾ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪೃಥ್ವಿರಾಜ್, ವಲಯಾಧ್ಯಕ್ಷ ಗಿರೀಶ್ ರೈ, ಸಂಟ್ಯಾರ್ ಬೂತ್ ಅಧ್ಯಕ್ಷ ಸುಹೈಲ್, ಆರ್ಯಾಪು ಕಾಂಗ್ರೆಸ್ ಬೂತ್ ಅಧ್ಯಕ್ಷ ಶಿವಪ್ರಸಾದ್ ಅಣ್ಣಿ, ಬಿ.ಎಲ್.ಎ. ಕೇಶವ ಸುವರ್ಣ, ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಲಾಂ ಸಂಪ್ಯ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾನದ ಸದಸ್ಯರಾದ ರವಿಚಂದ್ರ ಆಚಾರ್ಯ ಸಂಪ್ಯ, ಮೀನಾಕ್ಷಿ ಗೌಡ, ಗ್ರಾಪಂ ಮಾಜಿ ಸದಸ್ಯ ನೇಮಾಕ್ಷ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.























