ಕರಾವಳಿ

ಎಸ್.ಡಿ.ಎಂ ಐಟಿಐ ವೇಣೂರು: ನವೀಕೃತ ಕೈಗಾರಿಕಾ ಸಮಗ್ರ ವಿದ್ಯುತ್ ಕಾರ್ಯಗಾರ ಕೇಂದ್ರಕ್ಕೆ ಚಾಲನೆ | ಸ್ನೇಯ್ಡರ್ ಎಲೆಕ್ಟ್ರಿಕ್ ವತಿಯಿಂದ 22 ಲಕ್ಷ ರೂ. ಮೌಲ್ಯದ ವಿದ್ಯುತ್ ಉಪಕರಣಗಳ ಕೊಡುಗೆ

GL

ಈ ಸುದ್ದಿಯನ್ನು ಶೇರ್ ಮಾಡಿ

“ಕನಸುಗಳಿಲ್ಲದ ಬದುಕು ನಮ್ಮನ್ನು ಅತ್ಯಂತ ಸಾಮಾನ್ಯರನ್ನಾಗಿಸುತ್ತದೆ. ವಿದ್ಯಾರ್ಥಿಗಳು ದೃಢವಾದ ಪ್ರಯತ್ನ ಮತ್ತು ದೊಡ್ಡ ಕನಸುಗಳೊಂದಿಗೆ ಬದುಕಿನಲ್ಲಿ ಮುಂದೆ ಸಾಗಬೇಕು” ಎಂದು ಸ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ದೇವ್ ದಾಸ್ ಶೆಟ್ಟಿ ಹೇಳಿದರು.

maithri

ಅವರು ವೇಣೂರಿನ ಎಸ್.ಡಿ.ಎಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನವೀಕೃತ ಅತ್ಯಾಧುನಿಕ ಕೈಗಾರಿಕಾ ಸಮಗ್ರ ವಿದ್ಯುತ್ ಕಾರ್ಯಗಾರ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

electric

ಭಾರತೀಯ ಯುವಕರು ಕ್ರಿಯಾಶೀಲತೆಯ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲೇ ಬೆಳೆಸಿಕೊಳ್ಳಬೇಕು. “ಮೇಡ್ ಇನ್ ಇಂಡಿಯಾ” ಪರಿಕಲ್ಪನೆ ಯಶಸ್ವಿಯಾಗಲು ವಿದ್ಯಾರ್ಥಿಗಳ ಕೊಡುಗೆ ಅತ್ಯಗತ್ಯ. ಭಾರತಕ್ಕಾಗಿ ಮಾತ್ರವಲ್ಲ, ಜಾಗತಿಕ ಮಟ್ಟಕ್ಕೂ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಗುರಿ ಹೊಂದಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾದ ಸಿಎಸ್ಆರ್ ವಿಭಾಗದ ಡಿಜಿಎಂ ಪ್ರಶಾಂತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಯುತ ಶಿಕ್ಷಣದೊಂದಿಗೆ ಸ್ಪಷ್ಟ ಗುರಿ ಹೊಂದಿದರೆ ಉದ್ದಿಮೆ ಕ್ಷೇತ್ರದಲ್ಲಿ ಉದ್ಯೋಗದಾತರಾಗಿ ಬೆಳೆೆಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ಸಹಕಾರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಜೀವನದಲ್ಲಿ ಉನ್ನತ ಸ್ಥಾನ ತಲುಪಲು ಸಾಧ್ಯವಾಗುತ್ತದೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಿರಿಯ ವಯಸ್ಸಿನಲ್ಲೇ ಮಹತ್ತರ ಜವಾಬ್ದಾರಿಯನ್ನು ಹೊತ್ತು ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, 30 ವಿದ್ಯಾರ್ಥಿಗಳಿಂದ ಆರಂಭವಾದ ವೇಣೂರಿನ ಐಟಿಐ ಇಂದು 300 ವಿದ್ಯಾರ್ಥಿಗಳ ಮಟ್ಟಿಗೆ ಬೆಳೆದಿದ್ದು, ಪ್ರತಿ ವರ್ಷ ಶೇ.100 ದಾಖಲಾತಿ ಮತ್ತು ಶೇ.100 ಪ್ಲೇಸ್‌ಮೆಂಟ್ ಸಾಧಿಸುತ್ತಿದೆ ಎಂದರು.

ಟೊಯೋಟಾ, ಸ್ನೇಯ್ಡರ್ ಎಲೆಕ್ಟ್ರಿಕ್, ಬೋಶ್ ಸೇರಿದಂತೆ ಆರುಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ. ಸ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆ ಸಿಎಸ್ಆರ್ ಅಡಿಯಲ್ಲಿ ಸುಮಾರು ₹22 ಲಕ್ಷ ಮೌಲ್ಯದ ವಿದ್ಯುತ್ ಉಪಕರಣಗಳನ್ನು ಕಾರ್ಯಾಗಾರ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿರುವುದು ವಿದ್ಯಾರ್ಥಿಗಳ ತರಬೇತಿಗೆ ಬಹಳ ಉಪಯುಕ್ತವಾಗಲಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ದೇವ್ ದಾಸ್ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿಯವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಅತಿಥಿಗಳು ಕಾಲೇಜಿನ ಟೊಯೋಟಾ ಕಾರ್ಯಾಗಾರ, ಫಿಟ್ಟರ್, ಟರ್ನರ್ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಯಂತ್ರೋಪಕರಣಗಳ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಟೂಲ್ ಕಿಟ್ ವಿತರಣೆ

ಸ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆಯ ವತಿಯಿಂದ ಸುಮಾರು 50 ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ಬ್ಯಾಗ್‌ ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ರೋಹಿತ್, ಪ್ರದೀಪ್, ಕಾರ್ತಿಕ್ ರಾಜ್, ಧನುಶ್, ಸೂರಜ್ ಕಿಣಿ ಹಾಗೂ ಚೈತ್ರೇಶ್ ಸೇರಿದಂತೆ ಆರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ನಿವೃತ್ತ ಪ್ರಾಚಾರ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಪ್ರಭಾ ಮತ್ತು ಪೂಜಾ ಪ್ರಾರ್ಥಿಸಿದರು. ಪದ್ಮ ಪ್ರಸಾದ್ ಬಿ. ಕಾರ್ಯಕ್ರಮ ನಿರೂಪಿಸಿ, ರಾಮಚಂದ್ರ ಶೆಟ್ಟಿ ವಂದಿಸಿದರು.

ಆಧುನಿಕ ಸೌಲಭ್ಯ:

“ಶ್ರೀ ಕ್ಷೇತ್ರ ಧರ್ಮಸ್ಥಳವು ಧರ್ಮ, ಶ್ರದ್ಧೆ ಮತ್ತು ನಂಬಿಕೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿನ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳಿಗೆ ಕಲಿಸುತ್ತಿವೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಸಂಸ್ಥೆ ಒದಗಿಸಿದೆ.”
— ದೇವ್ ದಾಸ್ ಶೆಟ್ಟಿ, ಉಪಾಧ್ಯಕ್ಷರು, Schneider Electric India

ವಿದ್ಯಾರ್ಥಿಗಳು ತೊಡಗಿಸಿಕೊಳ್ಳಿಅಡಗಿಸಿಕೊಳ್ಳಬೇಡಿ : ಹರ್ಷೇಂದ್ರ ಕುಮಾರ್

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಏಕಾಗ್ರತೆ ಅತ್ಯಂತ ಮುಖ್ಯ. ಅವಕಾಶಗಳು ದೊರಕಿದಾಗ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ತೊಡಗಿಸಿಕೊಳ್ಳಬೇಕು, ಅಡಗಿಸಿಕೊಳ್ಳಬಾರದು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಹೇಳಿದರು.

ಕರ್ತವ್ಯವನ್ನು ಧೈರ್ಯದಿಂದ ನಿರ್ವಹಿಸಿದರೆ ಭಯ ದೂರವಾಗುತ್ತದೆ. ವೃತ್ತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು. ಆರಂಭದಲ್ಲಿ ಎದುರಾಗುವ ಅವಮಾನಗಳು ಮುಂದಿನ ಯಶಸ್ಸಿಗೆ ದಾರಿಯಾಗುತ್ತವೆ. ಜೀವನದಲ್ಲಿ “Learning” ಮತ್ತು “Earning” ಎರಡಕ್ಕೂ ಸಮಾನ ಮಹತ್ವ ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸ್ನೇಯ್ಡರ್ ಎಲೆಕ್ಟ್ರಿಕ್ನಿಂದ ಹಲವು ಭರವಸೆ

ಎಸ್.ಡಿ.ಎಂ ಐಟಿಐ ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಸ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳನ್ನು ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ವಿಶೇಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಸಂಸ್ಥೆ ಘೋಷಿಸಿತು.

ಇದೇ ವೇಳೆ ಕೈಗಾರಿಕಾ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ 21 ದಿನಗಳ ಉಚಿತ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರತಿನಿಧಿಗಳು ಭರವಸೆ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts