ಕರಾವಳಿ

ಗೋ ಹತ್ಯೆ ತಡೆ, ಬಲಿ ಕೊಟ್ಟ ಸ್ಥಳದ ಮುಟ್ಟುಗೋಲಿಗೆ ಒತ್ತಾಯಿಸಿದ ವಿಹಿಂಪ | ಹಿಜಾಬ್’ಗೆ ಅವಕಾಶ ಆದೇಶ ಹಿಂಪಡೆಯಲು ಒತ್ತಾಯ; ತಪ್ಪಿದರೆ ಹೋರಾಟದ ಎಚ್ಚರಿಕೆ – ಡಾ. ಕೃಷ್ಣಪ್ರಸನ್ನ | ಅಕ್ರಮ ಗೋ ಹತ್ಯೆ, ಸಾಗಾಟ ತಡೆಯಲು ನಾಗರಿಕರಿಗೂ ಇದೆ ಅವಕಾಶ: ವಿಶ್ವ ಹಿಂದೂ ಪರಿಷದ್

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗೋವಂಶದ ಹತ್ಯೆ, ಸಾಗಾಟ ಮತ್ತು ಬಲಿ (ಕುರ್ಬಾನಿ) ಕಟ್ಟುನಿಟ್ಟಾಗಿ ತಡೆಯುವಂತೆ ಹಾಗೂ ಗೋವಂಶದ ಬಲಿ ಕೊಟ್ಟ ಸ್ಥಳವನ್ನು ಮುಟ್ಟುಗೋಲು ಹಾಕುವ ಕಾನೂನು ಜಾರಿಗೊಳಿಸುವಂತೆ ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದೆ.

maithri

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಕರ್ನಾಟಕ ರಾಜ್ಯದಲ್ಲಿ ಗೋವಂಶ (ಹಸು, ಹೋರಿ, ಕರು ಹಾಗೂ 13 ವರ್ಷದೊಳಗಿನ ಎಮ್ಮೆ ಕೋಣ) ಹತ್ಯೆ, ಹಿಂಸೆ ಮತ್ತು ಬಲಿ ಸಂಪೂರ್ಣ ನಿಷೇಧಿಸಲ್ಪಟ್ಟಿದೆ. ಗೋವಂಶದ ಹತ್ಯೆ ಅಥವಾ ಬಲಿ ಕೊಟ್ಟ ಸ್ಥಳವನ್ನು (ಕಟ್ಟಡ, ಖಾಲಿ ಸ್ಥಳ, ಮನೆ ಅಥವಾ ಯಾವುದೇ ಜಾಗ) ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸರು ತಮ್ಮ ಪೂರ್ಣ ಅಧಿಕಾರ ಬಳಸಿ ಗೋಹತ್ಯೆ ತಡೆಯಬೇಕು. ನಿರ್ಲಕ್ಷ್ಯ ವಹಿಸುವ ಬೀಟ್ ಪೊಲೀಸರನ್ನು ತಕ್ಷಣ ಸಸ್ಪೆಂಡ್ ಮಾಡಿ ಇಲಾಖಾ ತನಿಖೆ ನಡೆಸಬೇಕು. ಮೇ 28ರವರೆಗೆ ಯಾವುದೇ ವಾಹನದಲ್ಲಿ ಅಕ್ರಮ ಗೋಸಾಗಾಟ ಆಗದಂತೆ ವಿಶೇಷ ಬಂದೋಬಸ್ತ್ ಮಾಡಬೇಕು, ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಹಾಕಿ ‘Closed Tanker’ ಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು. ಹೆಚ್ಚುವರಿ ಪೊಲೀಸ್ ಅಥವಾ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಬೇಕು ಮತ್ತು ಗೋಕಳ್ಳತನದ ಸುಳಿವು ಸಿಕ್ಕ ತಕ್ಷಣ ಪೊಲೀಸ್ ಕ್ವಾನ ದಳವನ್ನು ಬಳಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಆಧುನಿಕ ತಂತ್ರಜ್ಞಾನದ ಬಳಕೆ:

ಟೋಲ್ ಪ್ಲಾಜಾಗಳಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಇಲೆಕ್ಟ್ರಾನಿಕ್ ಸ್ಕ್ಯಾನರ್ ಹಾಗೂ ಮಾಹಿತಿ ತಿಳಿಯಲು ‘Silent Drone’ ಬಳಸಬೇಕು. ಹಳೆ ಅಪರಾಧಿಗಳನ್ನು (Repeat offenders) ಗುರುತಿಸಿ ಅವರಿಗೆ ಜಾಮೀನು ಸಿಗದಂತೆ ಕೋರ್ಟ್‌ಗೆ ಮಾಹಿತಿ ನೀಡಬೇಕು.  ಅಕ್ರಮ ಗೋಸಾಗಾಟದ ವಾಹನ ಮಾಲೀಕರನ್ನು ಕಡ್ಡಾಯವಾಗಿ ಬಂಧಿಸಬೇಕು ಕಾನೂನಿನ ಪ್ರಕಾರ ಇದಕ್ಕೆ 5 ವರ್ಷದವರೆಗೆ ಶಿಕ್ಷೆಯಿದೆ ಎಂದರು.

ಸಾರ್ವಜನಿಕರ ಸಹಕಾರ:

ಸಾರ್ವಜನಿಕರು ಗೋಹತ್ಯೆ / ಹಿಂಸೆ ನಡೆಯುವುದನ್ನು ಕಂಡರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 40 ರ ಪ್ರಕಾರ ಅಪರಾಧಿಯನ್ನು ತಾವೇ ಬಂಧಿಸಿ (Arrest by private person), ತಡಮಾಡದೆ ಗರಿಷ್ಠ 6 ಗಂಟೆಯೊಳಗೆ ಪೊಲೀಸರಿಗೆ ಹಸ್ತಾಂತರಿಸಲು ಕಾನೂನಿನಲ್ಲಿ ಅವಕಾಶವಿದೆ. ಇದರ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಬೇಕು. ಹಳ್ಳಿಗಳಲ್ಲಿ ಗೋಕಳ್ಳತನ ತಡೆಯಲು ಗೋಪಾಲಕರ ಮೂಲಕ ‘ಗ್ರಾಮ ಗೋರಕ್ಷ ದಳ ರಚಿಸಲು ಬಜರಂಗದಳ ಸಹಕರಿಸುತ್ತದೆ ಎಂದರು.

ಸಾರ್ವಜನಿಕರಲ್ಲಿ ವಿನಂತಿ:

ಗೋಸಂಬಂಧಿ ಅಪರಾಧಗಳು ಕಂಡುಬಂದಲ್ಲಿ ತಕ್ಷಣ 112 ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗೂ ಸ್ಥಳೀಯ ವಿಎಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರನ್ನು ಸಂಪರ್ಕಿಸಬೇಕು. ಮಾಹಿತಿ ಸಿಕ್ಕ ಮೇಲೂ ಪೊಲೀಸರು ಗೋವುಗಳನ್ನು ರಕ್ಷಿಸಲು ವಿಫಲವಾದರೆ, ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಮತ್ತು ಕೋರ್ಟ್‌ನಲ್ಲಿ ಸೂಕ್ತ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಹಿಜಾಬ್’ಗೆ ಅವಕಾಶ: ತೀವ್ರ ಖಂಡನೆ

ಶಿಕ್ಷಣ ಸಂಸ್ಥೆಗಳಲ್ಲಿ ವಿಧ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಅವಕಾಶ ನೀಡಿದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಕಾರ್ಯವೈಖರಿ ವಿವೇಚನಾರಹಿತ ಹಾಗೂ ತುಷ್ಟಿಕರಣದಿಂದ ಕೂಡಿದೆ. ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಹಳ್ಳ ಹಿಡಿದಿದೆ. ನೇಮಕಾತಿಯ ಬಗ್ಗೆ, ಯಾವುದೇ ನಿರ್ಧಾರ ಕೈಗೊಳ್ಳದೆ, ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿದ್ದರೂ, ಹಿಜಾಬ್ ಧರಿಸಲು ಆತುರಾತುರವಾಗಿ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಶಿಕ್ಷಣ ಕಾಯಿದೆ 1983 ರ ಸೆಕ್ಷನ್ 133(2) ರಂತೆ ಯಾವುದೇ ಶೈಕ್ಷಣಿಕ ಅಥವಾ ಟ್ಯೂಟೋರಿಯಲ್ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡುವ ಅಧಿಕಾರ ಸರ್ಕಾರಕ್ಕೆ ಇದೆ. ಆದಾಗ್ಯೂ, ನ್ಯಾಯಾಲಯಗಳು ಈ ಅಧಿಕಾರಿಗಳು ಸಂಪೂರ್ಣವಲ್ಲ ಎಂದು ತೀರ್ಪು ನೀಡಿ ಮತ್ತು ಕರ್ನಾಟಕ ಹೈಕೋರ್ಟ್ ಈ ನಿರ್ದಿಷ್ಟ ಸೆಕ್ಷನ್ ಒದಗಿಸಿದ ಅಧಿಕಾರಗಳ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸುವ ಸರ್ಕಾರಿ ಆದೇಶಗಳ ಸಿಂಧುತ್ವವನ್ನು ಎತ್ತಿಹಿಡಿದಿದೆ.

ಶಿಕ್ಷಣ ಇಲಾಖೆಯನ್ನು ಓಲೈಕೆ ರಾಜಕಾರಣಕ್ಕೆ ಬಳಸಿಕೊಂಡಿರುವುದು ತುಷ್ಟಿಕರಣದ ಕೆಟ್ಟ ಉದಾಹರಣೆ, ಇಂಥ ನಿರ್ಧಾರಗಳಿಂದ ವಿಧ್ಯಾರ್ಥಿಗಳಲ್ಲಿ ಒಡಕು ಮೂಡಿಸಿ ರಾಜ್ಯದಲ್ಲಿ ಆಶಾಂತಿಯನ್ನು ತರುವ ಹುನ್ನಾರವೇ ಎಂಬ ಅನುಮಾನ ಮೂಡುತ್ತಿದೆ ಎಂದರು.

ರಾಜ್ಯ ಸರಕಾರದ ಈ ಅಲ್ಪಸಂಖ್ಯಾತ ಓಲೈಕೆ ಹಾಗೂ ಆ ಮುಖಾಂತರ ಹಿಂದೂ ವಿಧ್ಯಾರ್ಥಿಗಳನ್ನು ಹಾಗೂ ಹಿಂದೂ ಸಮಾಜವನ್ನು ವಿರೋಧಿಸಬೇಕೆಂಬ ಧೋರಣೆಯನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಮತ್ತು ಈ ಕೂಡಲೇ ಆದೇಶವನ್ನು ವಾಪಾಸು ಪಡೆಯಬೇಕು ಇಲ್ಲವಾದರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ತೀವ್ರವಾದ ಹೋರಾಟವನ್ನು ಮಾಡಲಿದೆ.

ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಸಹಸಂಯೋಜಕರಾದ ದಿನೇಶ್ ಚಾರ್ಮಾಡಿ, ಸಂತೋಷ್ ಉಪ್ಪಿನಂಗಡಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts