ಬಂಟ್ವಾಳ: ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ನಿವಾಸಿ ಪ್ರಶಾಂತ್ ಬೆಳ್ಳಾಡ್ (41) ಅವರು ಸೆ.20ರಂದು ಸಂಜೆ ಅಲ್ಲಿದ್ದ ಸಂದರ್ಭದಲ್ಲಿ, ಆಟೋರಿಕ್ಷಾದಲ್ಲಿ ಬಂದ ಪರಿಚಯದ ಆರೋಪಿಗಳಾದ ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಅವರು ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಪ್ರಶಾಂತ್ ಬೆಳ್ಳಾಡ್ ಅವರಿಗೆ ಗಂಭೀರ ರಕ್ತಗಾಯಗಳಾಗಿದ್ದು, ಪರಿಚಯದವರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಬಳಿಕ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 124/2026ರಂತೆ ಬಿಎನ್‌ಎಸ್‌ನ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಪ್ರಶಾಂತ್, ರಾಮದಾಸ್ ಹಾಗೂ ಶಂಕರ ಅವರನ್ನು ಬಂಧಿಸಿದ್ದಾರೆ. ಸೆ.25ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಮೂವರನ್ನೂ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
























