ಪುತ್ತೂರು: ಹೊಸಮನೆ ಕ್ರಿಕೆಟರ್ಸ್‌ನಿಂದ ಆರ್ಯಾಪು ವತಿಯಿಂದ ಎರಡು ದಿನಗಳ ಕಾಲ ಕಾರ್ಪಾಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 10 ತಂಡಗಳ ಕ್ರಿಕೆಟ್ ಪಂದ್ಯಾಟ ‘ಆರ್ಯಾಪು ಪ್ರೀಮಿಯರ್ ಲೀಗ್ ಸೀಸನ್-1’ ಫೆ.8ರಂದು ಉದ್ಘಾಟನೆಗೊಂಡಿದ್ದು, ಫೆ. 9ರಂದು ಸಂಜೆ ಸಮಾರೋಪಗೊಳ್ಳಲಿದೆ. ಬಳಿಕ ಆರ್ಯಾಪು ಮ್ಯೂಸಿಕಲ್ ನೈಟ್ಸ್ ನಡೆಯಲಿದೆ.
ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವೇ.ಮೂ ಸಂದೀಪ್ ಕಾರಂತ ಮಾತನಾಡಿ, ಕಾರ್ಪಾಡಿ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶದ ಸಂದರ್ಭದಲ್ಲಿ ಅನ್ನದಾನ ನಡೆದ ಜಾಗದಲ್ಲಿಯೇ ಹೊಸಮನೆ ಕ್ರಿಕೆಟರ್ಸ್ ಮೂಲಕ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ನಿಮ್ಮ ಮೂಲಕ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆಗಳು ದೊರೆಯುವಂತಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕ್ರಿಕೆಟ್ ಆಯೋಜನೆಯ ಮುಖಾಂತರ ಯುವ ಸಮಾಜವನ್ನು ಒಟ್ಟು ಸೇರಿಸಿ ಸಮಾಜದಲ್ಲಿ ಪರಿಣಾಮಕಾರಿಯಾಗಿ, ಧನಾತ್ಮಕ ರೀತಿಯಲ್ಲಿ ಬದಲಾವಣೆ ತರುವ ಜೊತೆಗೆ ಕ್ರೀಡಾಪಟುಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗುತ್ತಿದೆ.ಯುವಕರ ಶಕ್ತಿ ಸಮಾಜಕ್ಕೆ ಸದ್ವಿನಿಯೋಗವಾಗಬೇಕು ಎಂದು ಹೇಳಿ, ಆರೋಗ್ಯಕರ ಸ್ಪರ್ಧೆಯೊಂದಿಗೆ ಪಂದ್ಯಾಟ ನಡೆಯಲಿ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಗ್ರಾಮದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳಲ್ಲಿ ಹೊಸಮನೆ ಯುವಕರ ತಂಡವಿದೆ. ನಿಮ್ಮ ಕಾರ್ಯವು ಕ್ರಿಕೆಟ್ ಗೆ ಸೀಮಿತವಾಗಿರದೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡು ಸಮಾಜದ ಸಮಸ್ಯೆಗಳಿಗೆ ಪರಿಹಾರವಾಗಬೇಕು ಎಂದರು.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಆರ್ಯಾಪು ಗ್ರಾಮದಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಕ್ರಿಕೆಟ್ ಪಂದ್ಯಾಟ ಉತ್ತಮವಾಗಿ ಆಯೋಜನೆಗೊಂಡಿದೆ. ಎಲ್ಲರ ಸಹಕಾರದಿಂದ ಎರಡು ದಿನಗಳ ಕಾಲ ಪಂದ್ಯಾಟ ಯಶಸ್ವಿಯಾಗಿ ನಡೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣರೈ ಮಾತನಾಡಿ, ಸೋಲು-ಗೆಲುವು ಪಂದ್ಯಾಟಕ್ಕೆ ಸೀಮಿತವಲ್ಲ, ಅದು ನೈಜ ಜೀವನದಲ್ಲಿಯೂ ಬರುತ್ತಿದ್ದು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು.ಒಂದು ಬಾರಿ ಸೋತರೂ ಮರುಗದೇ ಧೈರ್ಯದಿಂದ ಮುನ್ನಡೆದಾಗ ಯಶಸ್ಸು ಲಭಿಸಲಿದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಆಯೋಜಿಸುವ ಮೂಲಕ ಯುವಕರು ದೊಡ್ಡ ಸಾಹಸದ ಕೆಲಸ ಮಾಡಿದ್ದಾರೆ ಎಂದರು.
ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಸದಸ್ಯ ಚೇತನ್ ಗೌಡ ದೇವಸ್ಯ, ಬಡಿಯಾರ್ ಹೊಸಮನೆ ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಮಂಜಪ್ಪ ರೈ ಬಾರಿಕೆ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾರ್ನ ಲಕ್ಷ್ಮಣ್ ಬೈಲಾಡಿ, ಉದ್ಯಮಿ ನಿತಿನ್ ಪಕ್ಕಳ, ನಿವೃತ್ತ ಯೋಧ ಅಶೋಕ್ ಬೇಕಲ್, ಕಾರ್ಪಾಡಿಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ದೇವಯ್ಯ ಗೌಡ ದೇವಸ್ಯ, ಪ್ರಜ್ವಲ್ ಘಾಟೆ, ಉದ್ಯಮಿ ಭೀಮಯ್ಯ ಭಟ್, ಬಾಲಕೃಷ್ಣ ಗೌಡ ಕಾಣಿಕೆ, ಮುರಳಿ ಕೆಂಗುಡೇಲು, ಹೊಸಮನೆ ಕ್ರಿಕೆಟರ್‌ನ ಅಧ್ಯಕ್ಷ ಧನುಷ್ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹೊಸಮನೆ ಕ್ರಿಕೆಟರ್‌ನ ಪ್ರಧಾನ ಕಾರ್ಯದರ್ಶಿ ಪದನ್ ಶೆಟ್ಟಿ ಕಂಬಳತ್ತಡ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು.
ಪಂದ್ಯಾಟದಲ್ಲಿ ಭಾಗವಹಿಸಿದ ತಂಡಗಳು:
ಡಾ.ಸುರೇಶ್ ಪುತ್ತೂರಾಯ ಮಾಲಕತ್ವದ ‘ಟೀಮ್ ವಿಷ್ಣುಮೂರ್ತಿ’ ಸಂಪ್ಯ, ಗಂಗಾಧರ ಅಮೀನ್ ಹೊಸಮನೆ ಮಾಲಕತ್ವದ ‘ಹೊಸಮನೆ ಕ್ರಿಕೆಟರ್, ಜಯಂತ : ಶೆಟ್ಟಿ ಮಾಲಕತ್ವದ ‘ಟೀಮ್ ರತ್ನ ಶ್ರೀ’ ಪುತ್ತೂರು, ನಿತಿನ್ ಪಕ್ಕಳ ಮಾಲಕತ್ವದ ‘ ಶ್ರೀದತ್ತ ಕ್ರಿಕೆಟರ್ಸ್, ಪ್ರೀತಂ ಮೇರ್ಲ ಮಾಲಕತ್ವದ ‘ಟೀಮ್ ಎಸ್‌ಕೆಸಿ’, ಬಾಲಚಂದ್ರ ಗೌಡ ಮಾಲಕತ್ವದ ‘ಟೀಮ್ ಕಾರ್ಪಾಡಿ’, ಶರತ್ ಆಳ್ವ ಮಾಲಕತ್ವದ ‘ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆರ್ಟ್ಸ್ ಕ್ಲಬ್’ ಪುತ್ತೂರು, ಸಂತೋಷ್ ಸುವರ್ಣ ಮೇರ್ಲ ಮಾಲಕತ್ವದ ‘ಆರ್ಯನ್ ಮೋನ್‌ಸ್ಟಾರ್’ ಮೇರ್ಲ, ಸುರೇಶ್ ಪೆಲತ್ತಡಿ ಮಾಲಕತ್ವದ ‘ಸ್ವರ್ಣ ಸೈಕರ್ಸ್’ ಹಾಗೂ ನರೇಂದ್ರ ನಾಯಕ್ ಮಾಲಕತ್ವದ ಮರಕ್ಕೆ ಚಾಲೆಂಜರ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದೆ.
ಫೆ. 9ರಂದು ಸಂಜೆ ಸಮಾರೋಪ, ಮ್ಯೂಸಿಕಲ್ ನೈಟ್
ಪಂದ್ಯಾಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಫೆ.9ರಂದು ಸಂಜೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಝೀ ಕನ್ನಡ ಮತ್ತು ಕಲರ್ ಕನ್ನಡದ ಹೆಸರಾಂತ ಗಾಯಕರ ಸಮಾಗಮದೊಂದಿಗೆ ಆರ್ಯಾಪು ಮ್ಯೂಸಿಕಲ್ ನೈಟ್ ಮೇಲೈಸಲಿದೆ ಎಂದು ಹೊಸಮನೆ ಕ್ರಿಕೆಟರ್ಸ್ ಪ್ರಕಟಣೆ ತಿಳಿಸಿದೆ