ಪುತ್ತೂರು: ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಹಾಗೂ ಹಿಂದಿ ಸಂಘದ ಆಶ್ರಯದಲ್ಲಿ ಸೆ. 11ರಂದು ಕಾಲೇಜಿನ ಸಭಾಂಗಣದಲ್ಲಿ ‘ಹಿಂದಿ ದಿವಸ–2026’ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ ಕೆ.ಎಸ್. ಮಾತನಾಡಿ, ಭಾಷೆಗಳು ಸಂವಹನದ ಮಾಧ್ಯಮಗಳಾಗಿದ್ದು, ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಎಲ್ಲ ಭಾಷೆಗಳಿಗೂ ತನ್ನದೇ ಆದ ಮಹತ್ವವಿದ್ದು, ಅವು ಹಲವು ಅವಕಾಶಗಳಿಗೆ ದಾರಿದೀಪವಾಗುತ್ತವೆ ಎಂದು ಹೇಳಿದರು.
ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಒಂದೇ ರಥದ ಎರಡು ಚಕ್ರಗಳಿದ್ದಂತೆ. ಈ ಭಾಷೆಗಳನ್ನು ಕಲಿಯುವುದರಿಂದ ಭಾಷಾ ಜ್ಞಾನ ವೃದ್ಧಿಯಾಗುವುದರ ಜೊತೆಗೆ ವ್ಯಕ್ತಿತ್ವದ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಭಾಷಾ ಜ್ಞಾನವು ಮಾನವನ ಚಿಂತನಾ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ವಿವಿಧ ಸಂಸ್ಕೃತಿಗಳ ಪರಿಚಯವನ್ನು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ನಾವು ಕಲಿಯುವ ಪ್ರತಿಯೊಂದು ಭಾಷೆಯೂ ಹೊಸ ಸಂಸ್ಕೃತಿ ಹಾಗೂ ಹೊಸ ಸಮಾಜವನ್ನು ಪರಿಚಯಿಸುತ್ತದೆ. ಇದರೊಂದಿಗೆ ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ. ಭಾರತೀಯ ಭಾಷೆಗಳು ವ್ಯಾಕರಣದ ದೃಷ್ಟಿಯಿಂದ ಅತ್ಯಂತ ಶ್ರೀಮಂತವಾಗಿದ್ದು, ವಿವಿಧ ಭಾಷೆಗಳು ಜೀವನದ ಹಲವು ಹಂತಗಳಲ್ಲಿ ಉಪಯುಕ್ತವಾಗುತ್ತವೆ ಎಂದು ಹೇಳಿದರು.
ವೇದಿಕೆಯಲ್ಲಿ ಹಿಂದಿ ಸಂಘದ ನಿರ್ದೇಶಕಿ ಡಾ. ಬಿ. ಲತಾ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದಿ ದಿವಸದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಫಾತಿಮಾ ರಿಝ ಸ್ವಾಗತಿಸಿದರು. ಜಸ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ವೈಷ್ಣವ್ ಕೆ.ಎಸ್. ವಂದಿಸಿದರು. ಸಮರ್ಥ್ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು.





















