ದಯಾಮರಣದ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ. ಸ್ವಯಂ ನಿರ್ಧಾರದಿಂದ ದೇಹತ್ಯಾಗ ಮಾಡುವುದೇ ದಯಾಮರಣ. ಹೀಗೆ ದಯಾಮರಣ ಪಡೆದುಕೊಳ್ಳುವ ಮೊದಲು, ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎನ್ನುವುದೇ ಇಲ್ಲಿನ ನಿರ್ಬಂಧ.
ದಾವಣಗೆರೆಯ ನಿವೃತ್ತ ಶಿಕ್ಷಕಿ ಹೆಚ್.ಬಿ. ಕರಿಬಸಮ್ಮ ಅವರು ಕಳೆದ 24 ವರ್ಷಗಳಿಂದ ದಯಾಮರಣಕ್ಕಾಗಿ ಹೋರಾಟ ನಡೆಸುತ್ತಿದ್ದರು. ಇದೀಗ ಅವರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಬಾಲ್ಯದಲ್ಲಿಯೇ ಇವರು ವಿವಾಹವಾದರು. ಆದರೆ ಇವರು ವಿವಾಹವಾದ ವ್ಯಕ್ತಿ ಕುಷ್ಠರೋಗಕ್ಕೆ ಒಳಗಾಗಿದ್ದರು. ಕೆಲ ಸಮಯದಲ್ಲಿಯೇ ಕರಿಬಸಮ್ಮ ಅವರ ಪತಿ ಮೃತಪಟ್ಟರು. ಬಳಿಕ ಮರುಮದುವೆ ಆದರು. 2ನೇ ಪತಿಯೂ ಬಿಟ್ಟು ಹೋದರು. ಇದೀಗ ಅವರಿಗೆ 84 ವರ್ಷ. ಇದ್ದ ಮನೆಯನ್ನು ಮಾರಾಟ ಮಾಡಿ ಕಳೆದ 16 ವರ್ಷಗಳಿಂದ ವೃದ್ಧಾಶ್ರಮದಲ್ಲಿ ಜೀವನ ಕಳೆಯುತ್ತಿದ್ದಾರೆ. ಇದರೊಂದಿಗೆ ಕಳೆದ 24 ವರ್ಷಗಳಿಂದ ಕರುಳು ಕ್ಯಾನ್ಸರಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಘನತೆಯಿಂದ ಮರಣ ಹೊಂದುವ ಹಕ್ಕು ನೀಡುವಂತೆ ಹೋರಾಟ ನಡೆಸುತ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್.ಬಿ. ಕರಿಬಸಮ್ಮ, ಹತ್ತಾರು ಸಲ ಸಾವಿನ ಮನೆಗೆ ಹೋಗಿ ವಾಪಾಸ್ ಬಂದಿದ್ದೇನೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸಿಲ್ಲ. ಘನತೆಯಿಂದ ಮರಣ ಹೊಂದುವ ಕಾನೂನು ಜಾರಿಯಿಂದ ಸಂತಸವಾಗಿದೆ. ಕಾನೂನಾತ್ಮಕವಾಗಿ ಇಚ್ಛಾಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು ಎಂಬ ಬಯಕೆ ಇದೆ. ಈ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಘನತೆಯಿಂದ ಮರಣ ಹೊಂದುವ ಅವಕಾಶ ಇಲ್ಲದೇ ನರಳುತ್ತಿದ್ದಾರೆ. ಇದೀಗ ಅವರು ಘನತೆಯಿಂದ ಸಾಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದಿದ್ದಾರೆ.
ಕರಿಬಸಮ್ಮ ಅವರ ಮನೆಯನ್ನು ಮಾರಾಟ ಮಾಡಿ ಕೂಡಿಟ್ಟ 10 ಲಕ್ಷ ರೂ.ವನ್ನು ಗಡಿಭದ್ರತಾ ಪಡೆಯ ಜವಾನರ ಕಲ್ಯಾಣ ನಿಧಿಗೆ ನೀಡುವ ಬಗ್ಗೆ ತಿಳಿಸಿದ್ದಾರೆ.
ಹರ್ಷಗುಪ್ತಾ ಆದೇಶ:
ಸಾವಿನಲ್ಲಿಯೂ ಘನತೆ ಇರಬೇಕು ಎಂಬ ಹೋರಾಟ ದೇಶ – ವಿದೇಶದಲ್ಲಿ ನಡೆಯುತ್ತಿದೆ. ಇದರ ಬಗ್ಗೆ 2023ರ ಜನವರಿ 30ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಗುಣಪಡಿಸಲಾಗದ ಕಾಯಿಲೆಯಿಂದ ಕೊನೆಗಾಲದಲ್ಲಿ ಹಿಂಸೆ ಅನುಭವಿಸುತ್ತಿರುವವರು ಸಾವನ್ನಪ್ಪಬಹುದು ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ಆದೇಶವನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.
2025ರ ಜನವರಿ 24ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಆದೇಶ ಹೊರಡಿಸಿದ್ದು, ದಯಾಮರಣ ಹೊಂದುವಾಗ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳ ಪಾಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕೋರ್ಟ್ ನಿರ್ದೇಶನಗಳು ಹೀಗಿದೆ:
ನಿಮಯ ಒಂದು: ಚಿಕಿತ್ಸೆ ಪಡೆಯುತ್ತಿರುವ ವೈದ್ಯರ ಅನುಮತಿ.
ನಿಯಮ ಎರಡು: ರೋಗಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ವೈದ್ಯಕೀಯ ಮಂಡಳಿ ಸ್ಥಾಪನೆ.
ನಿಯಮ ಮೂರು: ವೈದ್ಯಕೀಯ ಮಂಡಳಿಯಲ್ಲಿ ಮೂರು ಜನ ವೈದ್ಯರಿರಬೇಕು.
ನಿಯಮ ನಾಲ್ಕು: ಈ ವೈದ್ಯಕೀಯ ಮಂಡಳಿ ದಯಾ ಮರಣದ ಬಗ್ಗೆ ತೆಗೆದುಕೊಂಡ ನಿರ್ಧಾರದ ಪ್ರತಿಯನ್ನು ಸ್ಥಳೀಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜೆಎಂಎಫ್ ಸಿ ನ್ಯಾಯಾಲಯ ಈ ಪ್ರತಿ ಹೈಕೋರ್ಟಗೆ ಕಳುಹಿಸುತ್ತದೆ. ಮರಣ ಇಚ್ಚೆಯ ಉಯಿಲು ಪಡೆಯಬೇಕು.
ನಿಯಮ ಐದು: ರೋಗಿಯು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಳೆದು ಕೊಂಡಾಗ ಅವರ ಪರವಾಗಿ ಕನಿಷ್ಠ ಇಬ್ಬರು ನಾಮನಿರ್ದೇಶನ ಮಾಡಬೇಕೆಂಬುದು ಸುಪ್ರೀಂ ತಾಕೀತು.