tamanvi
ಅಪರಾಧ

ಅವಿವಾಹಿತ ಪುರುಷರೇ ಟಾರ್ಗೆಟ್: ಒಂದೇ ಯುವತಿ, 9 ಮದುವೆ!!

ಈ ಸುದ್ದಿಯನ್ನು ಶೇರ್ ಮಾಡಿ

ಮದುವೆಯಾಗದ ಅವಿವಾಹಿತ ಪುರುಷರನ್ನೇ ಟಾರ್ಗೆಟ್ ಮಾಡಿ, ಮದುವೆಯ ನಾಟಕವಾಡಿ ವಂಚಿಸುತ್ತಿದ್ದ ಜಾಲದ ಬಗ್ಗೆ ಇದೀಗ ಮಹಾರಾಷ್ಟ್ರದಿಂದ ವರದಿಯಾಗಿದೆ.

ಈಗಾಗಲೇ 8 ವಿವಾಹವಾಗಿದ್ದು, 9ನೇ ವಿವಾಹದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಯೋಗೇಶ್ ಶಿಂಧೆ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ಘಟನೆ ವಿವರ:

ಯೋಗೇಶ್ ಶಿಂಧೆ ಎಂಬವರು ಮಧ್ಯವರ್ತಿಗಳ ಮೂಲಕ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದರು. ಏಜೆಂಟರು ಮದುವೆ ಏರ್ಪಡಿಸಲು ಅವರಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು. ಶಾಸ್ತ್ರೋಕ್ತವಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಏಜೆಂಟರು ಕಣ್ಮರೆಯಾದಾಗ ವಂಚನೆಯ ಅಸಲಿ ಮುಖವಾಡ ಕಳಚಿದೆ. ನಂತರದ ವಿಚಾರಣೆಯಲ್ಲಿ ಯೋಗೇಶ್‌ಗೆ ಬೆಚ್ಚಿಬೀಳಿಸುವ ಸತ್ಯವೊಂದು ತಿಳಿದುಬಂದಿದೆ.

ಈ ಮಹಿಳೆ ತನಗಿಂತ ಮೊದಲು ಈಗಾಗಲೇ ಎಂಟು ಪುರುಷರನ್ನು ಇದೇ ರೀತಿ ಮದುವೆಯಾಗಿದ್ದು, ಪ್ರತಿ ಬಾರಿಯೂ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು.

ದೂರಿನ ಪ್ರಕಾರ, ಈ ಜಾಲವು ಬೀಡ್ ಜಿಲ್ಲೆಯ ಗ್ರಾಮೀಣ ಭಾಗದ ಅವಿವಾಹಿತ ಪದವಿಧರ ಪುರುಷರನ್ನು ಗುರಿಯಾಗಿಸಿಕೊಂಡಿದೆ. ವಧು ಸಿಗದೆ ಹೆಣಗಾಡುತ್ತಿರುವ ಕುಟುಂಬಗಳ ದೌರ್ಬಲ್ಯವನ್ನು ಬಳಸಿಕೊಳ್ಳುವ ಈ ಗ್ಯಾಂಗ್, ಮದುವೆ ಮಾಡಿಸುವ ನೆಪದಲ್ಲಿ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿತ್ತು.

ತೀವ್ರ ಮಾನಸಿಕ ಅಘಾತಕ್ಕೊಳಗಾದ ಯೋಗೇಶ್  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ತಮಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ವಂಚನೆಯಿಂದ ನಾನು ಆತ್ಮಹತ್ಯೆಯ ಆಲೋಚನೆಯಲ್ಲಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಚಕ್ಲಾಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಾಲದ ಇತರ ಸದಸ್ಯರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲೆಯಾದ್ಯಂತ ಈ ಘಟನೆ ಭಾರೀ ಆತಂಕ ಮೂಡಿಸಿದ್ದು, ಇನ್ನು ಎಷ್ಟು ಮಂದಿ ಇವರ ಜಾಲಕ್ಕೆ ಬಲಿಯಾಗಿದ್ದಾರೆ ಎಂಬ ಸತ್ಯ ತನಿಖೆಯಿಂದ ಹೊರಬರಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 119