ವಾಣಿಜ್ಯ ವಾರ್ತೆ

ಕೆಮ್ಮಾರ: ಜೂನ್ 21ರಂದು ಬಡಾವಣೆ ಉಜ್ಜೀವನ ಲೋಕಾರ್ಪಣಾ | ಹಿರಿಯ ನಾಗರಿಕರಿಗಾಗಿ ದಿನಸಿಯಿಂದ ಔಷಧವರೆಗೆ ಸರ್ವ ಸೌಲಭ್ಯವೂ ಒಂದೇ ಸೂರಿನಡಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದ್ವಾರಕಾ ಕಾರ್ಪ್ ಪ್ರೈ ಲಿ.ನ ಮಹತ್ವಾಕಾಂಕ್ಷಿ ಯೋಜನೆ ಉಜ್ಜೀವನ ಇದರ ಲೋಕಾರ್ಪಣ ಸಮಾರಂಭ ಜೂನ್ 21ರಂದು ಮಧ್ಯಾಹ್ನ 3:30ಕ್ಕೆ ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ನಡೆಯಲಿದೆ ಎಂದು ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅರ್ತ್ಯಡ್ಕ ಗೋಪಾಲಕೃಷ್ಣ ಭಟ್ ಹೇಳಿದರು.

maithri

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿರುವ ‘ದ್ವಾರಕಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್, ಪುತ್ತೂರು ಸಂಸ್ಥೆಯು ಕಾಲೋಚಿತವಾಗಿ ವಿನೂತನ ಕಲ್ಪನೆಯೊಂದಿಗೆ ‘ಉಜ್ಜೀವನ’ ಎಂಬ ‘ಹಿರಿಯ ನಾಗರಿಕರ ಬಡಾವಣೆ’ಯನ್ನು ಲೋಕಾರ್ಪಣೆ ಮಾಡಲು ಸಿದ್ಧವಾಗಿದೆ. ‘ನಿವೃತ್ತಿ ಒಂದು ಹೊರೆಯಲ್ಲ, ಹೊಸ ಜೀವನದ ಆರಂಭ’ ಎಂಬ ನೀತಿಯನ್ನು ಮುಂದಿಟ್ಟುಕೊಂಡು ‘ಉಜ್ಜೀವನ’ವನ್ನು ರೂಪಿಸಲಾಗಿದೆ. ಕಳೆದ ಶತಮಾನದಲ್ಲಿ ವಿದೇಶಗಳಲ್ಲಿ ಪ್ರಗತಿಯಲ್ಲಿದ್ದ ಇಂತಹ ವ್ಯವಸ್ಥಿತ ಬಡಾವಣೆಗಳು ಇತ್ತೀಚೆಗೆ ನಮ್ಮ ದೇಶಕ್ಕೂ ಕಾಲಿಟ್ಟಿರುವುದು ಜ್ವಲಂತ ಸತ್ಯ. ಕಾಲದ ಅಗತ್ಯಕ್ಕನುಗುಣವಾಗಿ ಬದುಕನ್ನು ತಿದ್ದಿಕೊಳ್ಳಬೇಕಾಗಿರುವುದು ನಾಗರಿಕರಿಗೆ ಅವಶ್ಯವೂ ಹೌದು. ಯಾವಾಗ ಸಮಾಜವು ತನ್ನ ಸಂತತಿಯ ಅಭಿವೃದ್ಧಿಯಲ್ಲಿ ಸಂಖ್ಯೆಯ ಸೀಮೆಯನ್ನು ತಂದಿತೋ ಅಲ್ಲಿಂದ ಇಂತಹ ಒಂದು ವಿನೂತನ ವ್ಯವಸ್ಥೆಯ ಅಗತ್ಯಕ್ಕೂ ಮುನ್ನುಡಿ ಬರೆದಾಗಿತ್ತು. ಆರ್ಥಿಕವಾಗಿ ದುರ್ಬಲವಲ್ಲದಿರುವ ನಮ್ಮ ಸಮಾಜಕ್ಕೆ ಇಂದಿನ ಅಗತ್ಯವೆಂದರೆ, ಪ್ರೀತಿಯ ಆರೈಕೆ ಪೋಷಣೆಗಳಿಗೆ ಬೇಕಾದ ಮಾನವ ಸಂಪನ್ಮೂಲ. ಈ ಅಗತ್ಯವನ್ನು ಮನಗಂಡು ಉಜೀವನ ಬಡಾವಣೆಯನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಉಪ್ಪಿನಂಗಡಿ ಹೋಬಳಿಯ ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 113ರಲ್ಲಿ ಕೆಮ್ಮಾರ ಎಂಬ ಪ್ರದೇಶದಲ್ಲಿ 8,50,000 ಚದರ ಅಡಿಗಳ ಉಜೀವನ ಬಡಾವಣೆ ನಿರ್ಮಾಣಗೊಳ್ಳುತ್ತಿದೆ. ‘ದಿನಸಿಯಿಂದ ಔಷಧಿಯ ವರೆಗೆ’ ಎಂಬಂತೆ ಸರ್ವ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಹಿರಿಯರು ಪಡೆಯುವಂತೆ ಇಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಹಿರಿಯ ನಾಗರಿಕರು ಉಜ್ಜೀವನದಲ್ಲಿ ಹೊಸ ಜೀವನವನ್ನು ಆರಂಭಿಸಬಹುದಾಗಿದೆ. ಸೈಟುಗಳನ್ನು ಖರೀದಿಸಿ, ಮನೆಯನ್ನು ತಮ್ಮ ತಮ್ಮ ಅಭಿರುಚಿಯಂತೆ ಕಟ್ಟಿಸಿಕೊಂಡು, ಇಲ್ಲಿ ವಾಸವಾಗುವ ಹಿರಿಯರಿಗೆ ವಿವಿಧ ಸೌಲಭ್ಯಗಳಿವೆ. ಫಿಸಿಯೋಥೆರಪಿ ನ್ಯಾಚುರೋಪಥಿ ಕ್ಲಿನಿಕ್, ಮೆಡಿಕಲ್ಸ್, ರೆಸ್ಟೋರೆಂಟ್, ಸೂಪರ್ ಮಾರ್ಕೆಟ್, ಅತಿಥಿ ಕೊಠಡಿ, ಲೈಬ್ರರಿ, ಒಳಾಂಗಣ – ಹೊರಾಂಗಣ ಕ್ರೀಡಾ ಅಂಕಣಗಳು, ವಾಕಿಂಗ್ ಟ್ರ್ಯಾಕ್, ಧ್ಯಾನ ಮಂದಿರ, ಉದ್ಯಾನ, ಗೋಶಾಲೆ, ದಿನಪೂರ್ತಿ ನೀರಿನ ಸರಬರಾಜು, ತ್ಯಾಜ್ಯ ನಿರ್ವಹಣೆ, ಸ್ವಯಂ ಚಾಲಿತ ಬೀದಿ ದೀಪಗಳು, ಕಾಂಪೌಂಡ್ ಭದ್ರತೆ, ಕ್ಯಾಂಪಸ್ ವಾಹನ, ಕೇರ್ ಟೇಕರ್ಸ್, ಸಿಸಿ ಕ್ಯಾಮೆರಾ ಕಣ್ಣಾವಲು ಮುಂತಾದ ಹಲವು ವ್ಯವಸ್ಥೆಗಳನ್ನು ಸೌಲಭ್ಯಗಳನ್ನು ಇಲ್ಲಿ ಅನುಭವಿಸಬಹುದಾಗಿದೆ. ಇಲ್ಲಿ ಹಿರಿಯ ನಾಗರಿಕರು ಸ್ವಚ್ಛ ಸಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯೊಂದಿಗೆ ಬದುಕುವ ಸುಖಾನುಭವವನ್ನು ಪಡೆಯಬೇಕೆಂಬುದು ದ್ವಾರಕಾ ಸಮೂಹ ಸಂಸ್ಥೆಯ ಆಶಯವಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಗಣರಾಜ್ ಕುಂಬ್ಳೆ ಮಾತನಾಡಿ, ಮಧ್ಯಾಹ್ನ 3.30ಕ್ಕೆ ಗೋಪಾಲಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಬ್ರಿಜೇಶ್ ಚೌಟ ಬಡಾವಣೆ ಲೋಕಾರ್ಪಣೆ ಮಾಡಲಿದ್ದಾರೆ. ದ್ವಾರಕಾ ನೆಸ್ಟ್ ಅನ್ನು ಶಾಸಕ ಅಶೋಕ್ ಕುಮಾರ್ ರೈ ಲೋಕಾರ್ಪಣೆಗೊಳಿಸಲಿದ್ದಾರೆ. ದ್ವಾರಕಾ ರಿಫ್ರೆಶ್ಮೆಂಟ್ ಅನ್ನು ಶಾಸಕಿ ಭಾಗೀರಥಿ ಮುರುಳ್ಯ ಲೋಕಾರ್ಪಣೆಗೊಳಿಸುವರು. ಎಂ.ಎಲ್.ಸಿ. ಕಿಶೋರ್ ಕುಮಾರ್ ಬೊಟ್ಯಾಡಿ ದ್ವಾರಕಾ ಮಾರ್ಟ್ ಲೋಕಾರ್ಪಣೆಗೊಳಿಸುವರು. ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್ ಕುಮಾರ್, ಭಟ್ ಬಯೋಟೆಕ್ ನ ಶ್ಯಾಮ ಭಟ್, ಸಂಗೀತ ವಿದ್ವಾಂಸರಾದ ಕಾಂಚನ ರೋಹಿಣಿ ಸುಬ್ಬುರತ್ನಮ್, ಮಕ್ಕಳ ತಜ್ಞ ಡಾ. ಎಂ.ಎನ್. ಭಟ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಉಪ್ಪಂಗಳ, ಉದ್ಯಮಿ ಡಾ. ಹೇಮಂತ ರೈ ಮನವಳಿಕೆ, ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ತಾಪಂ ಇಓ ನವೀನ್ ಭಂಡಾರಿ, ಪುಡಾ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಎ.ಬಿ., ಮಂಗಳೂರು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಸ್ವಾತಿ ಎನ್. ಸ್ವಾಮಿ, ಹಿರೇಬಂಡಾಡಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಸದಾನಂದ ಶೆಟ್ಟಿ, ಪಿಡಿಓ ಸತೀಶ್ ಬಂಗೇರ ಅತಿಥಿಗಳಾಗಿರುವರು ಎಂದರು.

ಸಂಜೆ ಗಂಟೆ 6ರಿಂದ ಅಂತಾರಾಷ್ಟ್ರೀಯ ಗಾಯಕ ಬೆಂಗಳೂರಿನ ರಾಹುಲ್ ವೆಲ್ಲಾಲ್ ಬಳಗದವರಿಂದ ‘ಭಕ್ತಿಗಾನ ಸುಧಾ’ ಕಾರ್ಯಕ್ರಮ ಜರುಗಲಿದೆ ಎಂದರು.

ಸಂಸ್ಥೆಯ ಅಮೃತ ಕೃಷ್ಣ ಮಾತನಾಡಿ, ಮಯೂರ, ಶ್ರೀರಾಮ, ಗೋಕುಲ, ಮಾನಸ, ತುಳಸಿ, ಶೇಷಾದ್ರಿ, ಗೋಮತಿ, ಶಿವೋಹಂ, ನಂದಿಲ, ಹರಿಹರ, ಜಲಧಿ – ಮುಂತಾದ ಬಡಾವಣೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. 700ಕ್ಕೂ ಹೆಚ್ಚು ಮನೆಗಳನ್ನು ಈಗಾಗಲೇ ನಿರ್ಮಿಸಿ ಕೊಟ್ಟಿರುವ ಕೀರ್ತಿ ಸಂಸ್ಥೆಗೆ ಇದೆ. ದ್ವಾರಕಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಮಾತ್ರ ಸಂಸ್ಥೆಯಾಗಿದ್ದು ಇದರ ನೆರಳಿನಲ್ಲಿ, ದ್ವಾರಕಾ ಕನ್ನ ಕನ್ಸ್, ದ್ವಾರಕಾ ಕನ್ಸಲೆನ್ಸಿ, ದ್ವಾರಕಾ ಹಾರ್ಡೇರ್, ದ್ವಾರಕಾ ಸ್ಥಾನಿಟರಿ, ದ್ವಾರಕಾ ಟೈಲ್ಸ್ ದ್ವಾರಕಾ ಸಿಮೆಂಟ್ ಪ್ರಾಡಕ್ಟ್, ದ್ವಾರಕಾ ಆರ್ತ್ ಮೂವರ್ಸ್, ದ್ವಾರಕಾ ಫಾರ್ಮ್ಸ್, ಸುರಭಿ ಗೋಶಾಲೆ, ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಎಂಬ ಅನೇಕ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ‘ದ್ವಾರಕಾ ಪ್ರತಿಷ್ಠಾನ’ದ ಮೂಲಕವಾಗಿ, ವೇದ ಕಲೆ ಸಾಹಿತ್ಯ ಸಂಸ್ಕೃತಿ ಸಂವರ್ಧನದ ಕಾರ್ಯಕ್ರಮಗಳೂ ಸಮಾಜಮುಖಿಯಾದ ಸೇವಾ ಕಾರ್ಯಗಳೂ ನಡೆಯುತ್ತಿವೆ ಎಂದರು.
2026 ಜೂನ್ 30ರ ಒಳಗಾಗಿ ‘ಉಜ್ಜೀವನ ಬಡಾವಣೆ’ಯಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ‘ಉಜ್ಜೀವನ ಲೋಕಾರ್ಪಣ’ ಕಾರ್ಯಕ್ರಮದ ನಿಮಿತ್ತವಾಗಿ ಶೇಕಡಾ 10 ರ ರಿಯಾಯಿತಿ ದೊರೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಪರೇಷನ್ ಹೆಡ್ ದುರ್ಗಾ ಗಣೇಶ್, ನಿರ್ದೇಶಕಿ ಅಮೃತ ಶ್ಯಾನುಭೋಗ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವಿಟ್ಲ, ಉಪ್ಪಿನಂಗಡಿ, ಮಾಡಾವು, ಕುಂಬ್ರ, ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಕಾರ್ಯಕಾರಿ ಸಮಿತಿ ಸಭೆ

ಪುತ್ತೂರು: ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇದರ ನೇತೃತ್ವದಲ್ಲಿ ಪುತ್ತೂರು…

ಟೈಮ್ಸ್ ವ್ಯಾಪಾರ ಪ್ರಶಸ್ತಿ–2026: ಗೃಹ ನಿರ್ಮಾಣ ಕ್ಷೇತ್ರದಲ್ಲಿ ಯು ಆರ್ ಪ್ರಾಪರ್ಟೀಸ್‌ಗೆ ವರ್ಷದ ಶ್ರೇಷ್ಠ ಗೌರವ

ಮಂಗಳೂರು: ನಗರದ ಅವತಾರ್ ಹೋಟೆಲ್‌ನಲ್ಲಿ ನಡೆದ ಟೈಮ್ಸ್ ವ್ಯಾಪಾರ ಪ್ರಶಸ್ತಿ–2026 ಸಮಾರಂಭದಲ್ಲಿ…