ಮಾರುಕಟ್ಟೆ ಗುತ್ತಿಗೆದಾರನಿಗೆ ಅಧಿಕ ಸುಂಕ ನೀಡದ ಎಳನೀರು ವ್ಯಾಪಾರಿಯ ಅಂಗಡಿ ಪಕ್ಕದಲ್ಲಿ ರಾತ್ರೋರಾತ್ರಿ ಮತ್ತೊಂದು ಎಳನೀರು ಮಾರಾಟದ ಅಂಗಡಿಯನ್ನು ತೆರೆಯಲಾಗಿದೆ.
ಮೂಡಬಿದಿರೆ ಎಳನೀರು ವ್ಯಾಪಾರಿ ದಿನೇಶ್ ಅವರು ಇದುವರೆಗೆ ದಿನಕ್ಕೆ ₹ 280 ಸುಂಕವನ್ನು ಗುತ್ತಿಗೆದಾರರಿಗೆ ನೀಡುತ್ತಿದ್ದರು. ಇತ್ತೀಚೆಗೆ ಮಾರುಕಟ್ಟೆಯ ಟೆಂಡರ್ ಅನ್ನು ಹೊಸದಾಗಿ ಪಡೆದ ಗುತ್ತಿಗೆದಾರರು ₹ 400 ಸುಂಕ ನೀಡುವಂತೆ ದಿನೇಶ್ ಅವರಿಗೆ ಸೂಚಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಅವರ ಅಂಗಡಿಯ ಪಕ್ಕದಲ್ಲೇ ಮತ್ತೊಂದು ಅಂಗಡಿಯನ್ನು ಅನಧಿಕೃತವಾಗಿ ತೆರೆಯಲಾಗಿತ್ತು. ಈ ಬಗ್ಗೆ ದಿನೇಶ್ ಅವರು ಗುತ್ತಿಗೆದಾರನ ವಿರುದ್ಧ ಮೂಡುಬಿದಿರೆ ಪುರಸಭೆಗೆ ದೂರು ನೀಡಿದ್ದಾರೆ.
ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತ ಅಂಗಡಿಯನ್ನು ಬಂದ್ ಮಾಡಿಸಿ ಅಲ್ಲಿದ್ದ ಎಳನೀರನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ ಭೇಟಿ ನೀಡಿ ಸುಂಕದ ಹೆಸರಿನಲ್ಲಿ ಮಾರುಕಟ್ಟೆ ವ್ಯಾಪಾರಿಗಳಿಗೆ ತೊಂದರೆ ನೀಡಿದರೆ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.ಕನಕಮಜಲು