ಪುತ್ತೂರು: ಮೇ 9ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಬಿ.ಎಸ್.ವೈ. ಅಭಿಮಾನೋತ್ಸವಕ್ಕೆ ಪುತ್ತೂರಿನಿಂದ ಸಾವಿರಕ್ಕೂ ಹೆಚ್ಚು ಮಂದಿ ತೆರಳಲಿದ್ದು, ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 9ರಂದು ಚಿತ್ರದುರ್ಗದಲ್ಲಿ ಬಿ.ಎಸ್.ವೈ. ಅಭಿಮಾನೋತ್ಸವ ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ 10 ಲಕ್ಷದಷ್ಟು ಜನರು ಸೇರಲಿದ್ದಾರೆ. ಇದಕ್ಕಾಗಿ 120 ಎಕರೆ ವಿಶಾಲ ಜಾಗದಲ್ಲಿ ವ್ಯವಸ್ಥೆಯ ಕಾರ್ಯ ನಡೆಯುತ್ತಿದ್ದು, ಬಿ.ಎಸ್.ವೈ. ಅವರ ಕೊಡುಗೆಗಳನ್ನು ಮೆಲುಕು ಹಾಕುವ ಕಾರ್ಯ ನಡೆಯಲಿದೆ. ಬಿ.ಎಸ್. ಯಡಿಯೂರಪ್ಪ ಅವರು ಪುತ್ತೂರಿಗೂ ಹಲವು ಕೊಡುಗೆಗಳನ್ನು ನೀಡಿದ್ದು, ಪುತ್ತೂರಿನಿಂದ ಒಂದು ಸಾವಿರದಷ್ಟು ಮಂದಿ ಹೆಸರು ನೀಡಿದ್ದಾರೆ. ಇನ್ನು ಹೆಸರು ನೀಡಿದರೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದರು.
ಮೇ 8ರಂದು ರಾತ್ರಿ 9.30ಕ್ಕೆ ಪುತ್ತೂರಿನಿಂದ ಬಸ್ ಹೊರಡಲಿದೆ. ಮರುದಿನ ಅಂದರೆ ಮೇ 9ರಂದು ಬಿ.ಎಸ್.ವೈ. ಅಭಿಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಆಗಮಿಸುವ ಇಚ್ಛೆಯುಳ್ಳವರನ್ನು ಕರೆದೊಯ್ಯಲಾಗುವುದು. ಇದಲ್ಲದೇ ಅನೇಕ ಮಂದಿ ತಮ್ಮ ಖಾಸಗಿ ವಾಹನದಲ್ಲಿ ಆಗಮಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಧೀಮಂತ ವ್ಯಕ್ತಿ ಬಿ.ಎಸ್. ಯಡಿಯೂರಪ್ಪ ಅವರು. ದಲಿತ, ದುಃಖಿತ, ರೈತಾಪಿ, ಕಾರ್ಮಿಕ ಸೇರಿದಂತೆ ಎಲ್ಲಾ ವರ್ಗದವರ ಕಣ್ಣೀರೊರೆಸಿದ ನಾಯಕ. 8 ಬಾರಿ ಶಾಸಕರಾಗಿ, 4 ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದವರು. ಇವರ ಕೊಡುಗೆಗಳನ್ನು ಮತ್ತೊಮ್ಮೆ ಮೆಲುಕು ಹಾಕಬೇಕು ಎಂಬ ಉದ್ದೇಶದಿಂದ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ, 10 ಲಕ್ಷಕ್ಕೂ ಅಧಿಕ ಮಂದಿಗೆ ವ್ಯವಸ್ಥೆ ಕಲ್ಪಿಸುವುದು ಕಷ್ಟ ಎಂಬ ದೃಷ್ಟಿಯಿಂದ ಚಿತ್ರದುರ್ಗದಲ್ಲಿ ಬಿ.ಎಸ್.ವೈ. ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪುತ್ತೂರಿಗೆ ಕೊಡುಗೆ:
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪುತ್ತೂರು ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮಂಜೂರಾಗಿತ್ತು. ಪುತ್ತೂರು ಆಡಳಿತ ಸೌಧ, ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ, ಅಗ್ನಿಶಾಮಕ ಕಟ್ಟಡ, ಬೆಳಿಯೂರು ಅಣೆಕಟ್ಟು, ಜಲಸಿರಿ ಯೋಜನೆಯಡಿ 115 ಕೋಟಿ ರೂ. ಮಂಜೂರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಪುತ್ತೂರಿಗೆ ನೀಡಿದ್ದಾರೆ ಎಂದು ಸಂಜೀವ ಮಠಂದೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ನಿಕಟಪೂರ್ವ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಫಲಾನುಭವಿ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನಿತೀಶ್ ಶಾಂತಿವನ, ನಗರ ಮಂಡಲ ಉಪಾಧ್ಯಕ್ಷೆ ವಸಂತಲಕ್ಷ್ಮೀ, ಬಿ.ಎಲ್.ಎ. 1 ಸಂಚಾಲಕ ಹರೀಶ್ ಬಿಜತ್ರೆ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.























