ಸ್ಥಳೀಯ

ಸಜಂಕಾಡಿ ಶಾಲೆಯಲ್ಲಿ ಪರಿಸರ ಪ್ರೀತಿ ಹಂಚುವ ವಿಶಿಷ್ಟ ಪರಿಕಲ್ಪನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಜಂಕಾಡಿ ಸರಕಾರಿ ಶಾಲೆಯಲ್ಲಿ ಮನೆಗೊಂದು ಗಿಡ ಎನ್ನುವ ವಿಶಿಷ್ಟ ಪರಿಕಲ್ಪನೆಯಡಿ ಪರಿಸರ ದಿನವನ್ನು ಆಚರಿಸಲಾಯಿತು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಯಶೋಧ ಅವರು ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ಸಂಪಿಗೆ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

SRK Ladders

ಮುಖ್ಯ ಅತಿಥಿಯಾಗಿದ್ದ ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ರವಿರಾಜ ರೈ ಅವರು ‘ಮನೆಗೊಂದು ಗಿಡ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಾಗತಿಕ ತಾಪಮಾನ ಏರುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಕೆ., ಪ್ರಗತಿ ಪರ ಕೃಷಿಕ ಕಾಂತಪ್ಪ ಪೂಜಾರಿ ಮಡತ್ತನ ಮೂಲೆ ಶುಭಹಾರೈಸಿದರು.

ಪರಿಸರ ದಿನದ ಪ್ರಯುಕ್ತ ಮಕ್ಕಳಲ್ಲಿ ಗಿಡವನ್ನು ನೆಟ್ಟು ಬೆಳೆಸುವ ಆಸಕ್ತಿ ಮೂಡಿಸಲು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಗಳೂರು -ಪುತ್ತೂರು ಘಟಕ ,ಅರಣ್ಯ ಇಲಾಖೆ ಪುತ್ತೂರು ವಲಯದ ಸಹಕಾರದಲ್ಲಿ ರಂಬೂಟಾನ್, ಬಟರ್ ಪ್ರೂಟ್, ಪುನರ್ಪುಳಿ, ಸಂಪಿಗೆ, ಬಿಲ್ಪಪತ್ರೆ, ನೇರಳೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಪ್ರತಿ ಮಗುವಿಗೂ ನೀಡುವ ಮೂಲಕ “ಮನೆಗೊಂದು ಗಿಡ ” ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು

ಏನಿದು ಮನೆಗೊಂದು ಗಿಡ ಪರಿಕಲ್ಪನೆ ?

ಬೆಳೆಯುವ ಸಿರಿ ಮೊಳಕೆಯಲ್ಲಿ… ಎಂಬ ಮಾತಿನಂತೆ ಎಳೆಯ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ಮನೆಗೊಂದರಂತೆ ಮಗುವಿನ ಕೈಯಲ್ಲಿ ಗಿಡ ನೀಡಿ, ಮಗು ಆ ಗಿಡವನ್ನು ತನ್ನ ಮನೆಯ ಆವರಣದಲ್ಲಿ ನೆಟ್ಟು ಪೋಷಿಸುವ ಮೂಲಕ ಪರಿಸರ ಪ್ರೀತಿ ಹುಟ್ಟಿಸುವ ಪ್ರಯತ್ನ ಇದು.

ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣೇಶ ನಾಯಕ್ ಪುತ್ತೂರು ಸಹಕರಿಸಿದರು. ಶಿಕ್ಷಕಿ ಶಶಿಕಲಾ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರೂ , ಪೋಷಕರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2