ಪುತ್ತೂರು: ಬಸಳೆ ಎಂದಾಕ್ಷಣ ಸಾಮಾನ್ಯವಾಗಿ ಬಳ್ಳಿ ಬಸಳೆಯೇ ನೆನಪಾಗುತ್ತದೆ. ಆದರೆ ಯಾವುದೇ ವಿಶೇಷ ಆರೈಕೆ ಇಲ್ಲದೆ, ತನ್ನಿಂದ ತಾನೇ ಬೀಜ ಬಿದ್ದು ಗಿಡವಾಗಿ ಬೆಳೆಯುವ ನೆಲ ಬಸಳೆ ಕೂಡ ಇದೆ. ಮನೆಯ ಸುತ್ತಮುತ್ತ, ತೋಟದ ಬದಿಗಳಲ್ಲಿ ಸಹಜವಾಗಿ ಬೆಳೆಯುವ ಈ ಸೊಪ್ಪು ಪೌಷ್ಟಿಕಾಂಶಗಳಿಂದ ಕೂಡಿದೆ.
ನೆಲ ಬಸಳೆಯ ಸೊಪ್ಪಿನಲ್ಲಿ ವಿಟಮಿನ್ ಎ, ಸಿ ಹಾಗೂ ಕಬ್ಬಿಣದ ಅಂಶಗಳಿವೆ. ಇದನ್ನು ಪಲ್ಯ, ಸಾರು, ಸಾಂಬಾರ್ ಸೇರಿದಂತೆ ವಿವಿಧ ಅಡುಗೆಗಳಲ್ಲಿ ಬಳಸಬಹುದು. ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ಮಲಬದ್ಧತೆ ನಿವಾರಣೆಗೆ ನೆರವಾಗುತ್ತದೆ ಎಂಬ ನಂಬಿಕೆಯೂ ಇದೆ. ದೇಹಕ್ಕೆ ತಂಪು ನೀಡುವ ಹಾಗೂ ರೋಗನಿರೋಧಕ ಶಕ್ತಿಗೆ ಪೂರಕವಾಗುವ ಗುಣಗಳಿರುವುದಾಗಿ ಸ್ಥಳೀಯವಾಗಿ ಬಳಸಲಾಗುತ್ತದೆ.
ನೆಲ ಬಸಳೆಯಿಂದ ಪುಂಡಿ, ಗಸಿ, ಪತ್ರೋಡೆ, ಸಾಸಿವೆ, ಮೆಲೋಗರ, ಹುಳಿ ಸೇರಿದಂತೆ ಹಲವು ಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸಬಹುದು. ಅನ್ನ ಹಾಗೂ ದೋಸೆಯೊಂದಿಗೂ ಇದನ್ನು ಬಳಸಲಾಗುತ್ತದೆ.
ಬಸಳೆಯಲ್ಲಿ ಸಾಮಾನ್ಯವಾಗಿ ಕಾಡು ಬಸಳೆ, ನೆಲ ಬಸಳೆ ಹಾಗೂ ಬಳ್ಳಿ ಬಸಳೆ (ಕೆಂಪು ಬಸಳೆ) ಎಂಬ ವಿಧಗಳನ್ನು ಕಾಣಬಹುದು. ಸ್ಥಳೀಯವಾಗಿ ಕಾಡು ಬಸಳೆಯನ್ನು ವಿವಿಧ ಮನೆಮದ್ದುಗಳಲ್ಲಿಯೂ ಬಳಸುವ ಪದ್ಧತಿ ಇದೆ. ಆದರೆ ಯಾವುದೇ ಸೊಪ್ಪನ್ನು ಔಷಧಿಯಾಗಿ ಬಳಸುವ ಮುನ್ನ ಅದರ ಸರಿಯಾದ ಸಸ್ಯ ಗುರುತು ಹಾಗೂ ತಜ್ಞರ ಸಲಹೆ ಪಡೆಯುವುದು ಸೂಕ್ತ.
ಪ್ರಕೃತಿಯಲ್ಲಿ ಸಹಜವಾಗಿ ಬೆಳೆಯುವ, ಹೆಚ್ಚಿನ ಆರೈಕೆಯ ಅಗತ್ಯವಿಲ್ಲದ ನೆಲ ಬಸಳೆ ನಮ್ಮ ಸುತ್ತಮುತ್ತಲೇ ದೊರೆಯುವ ಪೌಷ್ಟಿಕ ಸೊಪ್ಪುಗಳಲ್ಲಿ ಒಂದಾಗಿದೆ.
ಮಾಹಿತಿ: ಕುಮಾರ್ ಪೆರ್ನಾಜೆ, ಪುತ್ತೂರು
ವಿಳಾಸ: ಪೆರ್ನಾಜೆ ಮನೆ, ಪೆರ್ನಾಜೆ ಪೋಸ್ಟ್, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ – 574223
ಮೊ.: 9480240643































