ಪುತ್ತೂರು: ನನ್ನಲ್ಲಿ ಶಕ್ತಿ ಇರುವ ತನಕ ನಾನು ಬಡವರ ಸೇವೆಯನ್ನು ಮಾಡುತ್ತಲೇ ಇರುವೆ, ನಾನು ಬಡವರಿಗೆ ಸಹಾಯ ಮಾಡುವಾಗ, ಉಡುಗೋರೆ ನೀಡುವಾಗ ಅನೇಕರು ಗೇಲಿ ಮಾಡುತ್ತಾರೆ ಅವರು ಗೇಲಿ ಮಾಡುವುದು ನನ್ನಲ್ಲ ಬಡವರನ್ನು , ಯಾರೇ ಏನೇ ಗೇಲಿ ಮಾಡಲಿ ನಾನು ಬಡವರ ಸೇವೆಯನ್ನು ನಿಲ್ಲಿಸುವುದೇ ಇಲ್ಲ, ಬಡವರ ಆಶೀರ್ವಾದದಿಂದ ನಾನು ಶಾಸಕನಾಗಿದ್ದು ಚುನಾವಣೆಯ ವೇಳೆ ನನ್ನನ್ನು ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ನಂಬಿಕೆ ನನ್ನಲ್ಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಸಂಪ್ಯ ಕಮ್ಮಾಡಿ ಮೈದಾನದಲ್ಲಿ ಆರ್ಯಾಪು ಹಾಗೂ ಕುರಿಯ ಗ್ರಾಮಸ್ಥರಿಗೆ ಅಶೋಕಜನಮನ ಉಡುಗೋರೆ ವಿತರಣೆ ಮಾಡಿ ಮಾತನಾಡಿದರು.
ಪುತ್ತೂರು ಸೇರಿದಂತೆ ಜಿಲ್ಲೆಯಲ್ಲಿ ಎಷ್ಟೋ ಜನ ದುಡ್ಡಿದ್ದವರಿದ್ದಾರೆ ಆದರೆ ಯಾರೂ ಗಂಟು ಬಿಚ್ಚುತ್ತಿಲ್ಲ. ಇಲ್ಲಿರುವ ಎಲ್ಲಾ ಶ್ರೀಮಂತರು ಬಡವರಿಗೆ ಸಹಾಯ ಮಾಡಿದ್ದಲ್ಲಿ ಬಡವರ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆ ತರಬಹುದು ಎಂದು ಹೇಳಿದ ಶಾಸಕರು ಅಶೋಕ ಜನಮನ ಕಾರ್ಯಕ್ರಮದಲ್ಲಿ ಹಲವರಿಗೆ ಉಡುಗೋರೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿ ನನಗೆ ನನ್ನ ಕುಟುಂಬಕ್ಕೆ ಬೇಸರವಾಗಿತ್ತು ನಈ ಕಾರಣಕ್ಕೆ ಗ್ರಾಮಗಳಿಗೆ ತೆರಳಿ ಗ್ರಾಮದ ಪ್ರತೀ ಕುಟುಂಬಕ್ಕೂ ಉಡುಗೋರೆಯನ್ನು ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಸರಕಾರದ ಗ್ಯಾರಂಟಿಯೋಜನೆ ತುಂಬಾ ಲಾಭವಾಗಿದೆ
ಕರ್ನಾಟಕ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆ ಪ್ರತೀ ಕುಟುಂಬಕ್ಕೂ ನೆರವಾಗಿದೆ. ಇದುವರೆಗೆ ರಾಜ್ಯವನ್ನಾಳಿದ ಯಾವುದೇ ಸರಕಾರ ಇಂಥಹ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಸರಕಾರದ ಈ ಯೋಜನೆಯನ್ನು ಎಲ್ಲರಿಗೂ ನೀಡಿದೆ. ಪಕ್ಷ ಬೇದವಿಲ್ಲದೆ , ಬಿಜೆಪಿಯವರಿಗೂ ನೀಡಿದ್ದೇವೆ. ಕಾಂಗ್ರೆಸ್ ಆಡಳಿತದಲ್ಲಿ ಪಕ್ಷ ಬೇದವಿಲ್ಲ, ಜಾತಿ, ಧರ್ಮದ ರಾಜಕೀಯವಿಲ್ಲ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಕಾಣುತ್ತೇವೆ ಎಂದು ಹೇಳಿದ ಶಾಸಕರು ಗ್ಯಾರಂಟಿ ಯೋಜನೆಯನ್ನು ಗೇಲಿ ಮಾಡುವ ಬಿಜೆಪಿಯವರ ಪತ್ನಿಗೂ ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಯೋಜನೆಯನ್ನು ನೀಡಿ ಅವರಿಗೂ ನೆರವಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಮಾತಾಡ್ಲಿಕ್ಕೆ ಗೊತ್ತಿಲ್ಲ ಎಡೆಗೆ ಬಾಯಿ ಹಾಕುತ್ತಾರೆ
ವಿದಾನಸಭಾ ಅಧಿವೇಶನದಲ್ಲಿ ತುಳುವಿನ ಬಗ್ಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಲು ಬಾಯಿ ತೆರೆದರೆ ಸಾಕು ಜಿಲ್ಲೆಯ ಉಳಿದ ಶಾಸಕರು ಎಡೆಗೆ ಬಾಯಿ ಹಾಕುತ್ತಾರೆ ಎಂದು ವ್ಯಂಗ್ಯವಾಡಿದ ಶಾಸಕರು ಇಷ್ಟು ವರ್ಷ ಶಾಸಕರಾಗಿದ್ರಲ್ಲ ಆವಾಗ ಯಾಕೆ ತುಳುವಿನ ಬಗ್ಗೆ ಜಿಲ್ಲೆಯ ಸಮಸ್ಯೆ ಬಗ್ಗೆ ಅವರು ಮಾತನಾಡಿಲ್ಲ. ನಾನು ವಿಷಯ ಪ್ರಸ್ತಾಪ ಮಾಡಿದಾಗ ಒಬ್ಬರ ಮೇಲೊಬ್ಬರಂತೆ ಬಂದು ಚರ್ಚೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕರನ್ನು ಅಶೋಕ್ ರೈ ಕುಟಕಿದರು.
ಜನತೆ ಅಭಿವೃದ್ದಿ ಪರ ಇದ್ದಾರೆ
ಪುತ್ತೂರಿನ ಜನತೆ ಅಭಿವೃದ್ದಿ ಬಯಸಿದ್ದಾರೆ. ಅಭಿವೃದ್ದಿಯಾಗಬೇಕು ಎಂಬುದು ಇಲ್ಲಿನ ಪ್ರತೀಯೊಬ್ಬರ ಆಸೆಯಾಗಿದೆ. ಮೆಡಿಕಲ್ ಕಾಲೇಜು ತರಲು ಯಾರಿಂದಲೂ ಸಾಧ್ಯವಾಗಿಲ್ಲ, ಪುತ್ತೂರಿಗೆ 2400 ಕೋಟಿ ರೂ ಅನುದಾನವನ್ನು ತಂದಿದ್ದೇನೆ, ಬಡವರಿಗೆ ನಿವೇಶನ ಹಂಚಲು ೩೮೦ ಎಕ್ರೆ ಜಮೀನು ಕಾಯ್ದಿರಿಸಿದ್ದೇನೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ, ಇಇದುವರೆಗೂ ಪುತ್ತೂರಿನಲ್ಲಿ ಆಗದ ಕೆಲಸಗಳು ಆಗುತ್ತಿದೆ ಇದೆಲ್ಲವನ್ನೂ ಜನ ಒಪ್ಪಿಕೊಂಡಿದ್ದಾರೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡಿಲ್ಲ. ಅಕ್ರಮ ಸಕ್ರಮದಲ್ಲೂ ರಾಜಕೀಯ ಮಾಡಿಲ್ಲ ಈ ಕಾರಣಕ್ಕೆ ಅನ್ಯ ಪಕ್ಷದ ಮಂದಿಯೂ ನಮ್ಮ ಜೊತೆ ಸೇರಿಕೊಳ್ಳುತ್ತಿದ್ದಾರೆ, ಅಭಿವೃದ್ದಿ ಮಾಡಿ ಎಂದು ಬೆನ್ನು ತಟ್ಟುತ್ತಿದ್ದಾರೆ. ಧರ್ಮಾಧಾರಿತ ರಾಜಕೀಯಕ್ಕೆ ಜನರ ಬೆಂಬಲ ಇಲ್ಲ. ಸರಕಾರಿ ಜಾಗದಲ್ಲಿರುವ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡುವ ಮೂಲಕ ನೈಜ ಹಿಂದುತ್ವವನ್ನು ಜನರ ಮುಂದೆ ಪ್ರದರ್ಶನ ಮಾಡಿದ್ದೇನೆ , ಧರ್ಮದ ಹೆಸರಿನಲ್ಲಿ ವೋಟು ಕೇಳುವವರಿಗೆ ಇದು ಸಾಧ್ಯವಾಗಿದೆಯಾ ಎಂದು ಬಿಜೆಪಿಗರ ಕಾಲೆಳೆದರು.
ಉಡುಗೊರೆ ವಿತರಣೆ
ಕಮ್ಮಾಡಿ ಮೈದಾನದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಉಡುಗೋರೆ ಪಡೆಯಲು ಆರ್ಯಾಪು ಮತ್ತು ಕುರಿಯ ಗ್ರಾಮದ ಮೂರು ಸಾವಿರಕ್ಕೂ ಮಿಕ್ಕಿ ಗ್ರಾಮಸ್ಥರು ಆಗಮಿಸಿದ್ದರು. ಬಂದಿರುವ ಎಲ್ಲರಿಗೂ ಉಡುಗೋರೆಯನ್ನು ವಿತರಣೆ ಮಾಡಲಾಯಿತು. ಮುಂದಿನ ಭಾನುವಾರ ಇನ್ನೊಂದು ಗ್ರಾಮದಲ್ಲಿ ಇದೇ ರೀತಿ ಉಡುಗೋರೆ ವಿತರಣೆ ನಡೆಯಲಿದೆ. ಸಂಪ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರ ಪತ್ನಿ ಸುಮಾ ಅಶೋಕ್ ರೈ ಅವರು ಜೊತೆಯಾದರು. ಪತಿಪತ್ನಿಯರಿಬ್ಬರೂ ಸೇರಿದ್ದ ಜನರಿಗೆ ಉಡುಗೋರೆ ವಿತರಣೆ ಮಾಡಿದರು.
ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ರೈ ಚಾರಿಟೇಬಲ್ ಟ್ರಸ್ಟ್ ಪ್ರಮುಖರಾದ ರಮೇಶ್ ರೈ ಡಿಂಬ್ರಿ, ಕುರಿಯ ವಲಯಾಧ್ಯಕ್ಷ ಸನತ್ ರೈ ಕುರಿಯ, ಶಿವರಾಮ ಆಳ್ವ ಬಳ್ಳಮಜಲು, ಶರೂನ್ ಸಿಕ್ವೆರಾ, ಜಯಪ್ರಕಾಶ್ ಬದಿನಾರ್, ಹಿರಿಯ ಕಾಂಗ್ರೆಸ್ ಮುಖಂಡ ಬೂಡಿಯಾರ್ ಪುರುಷೋತ್ತಮ ರೈ,ಜೋಕಿಂಡಿಸೋಜಾ ಬನ್ನೂರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ವಂದಿಸಿದರು. ನೇಮಾಕ್ಷ ಸುವರ್ಣ ಮಗಿರೆ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಸಾಮಾನಿ, ಶಾಸಕರ ಕಚೇರಿ ಸಹಾಯಕರಾದ ಪ್ರವೀಣ್ ಬನ್ನೂರು, ಲಿಂಗಪ್ಪ, ವಿನೋದ್‌ರೈ ಕೊಳ್ತಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಂಗೀತ ರಸಮಂಜರಿ ಆಯೋಜನೆ ಮಾಡಲಾಗಿತ್ತು. ಸಂಜೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
























