ಪುತ್ತೂರು: ಸದಾ ಕಾಲ ತನ್ನನ್ನು ತಾನು ಸೇವೆಗೆ ಮುಡಿಪಾಗಿಟ್ಟು ಇಲಾಖಾ ಕೆಲಸಗಳಲ್ಲಿಯೂ ತೊಡಗಿಸಿಕೊಂಡು ಕ್ರೀಯಶೀಲ ಶಿಕ್ಷಕಿಯಾಗಿದ್ದ ಗಂಗಾವತಿಯವರು ತನ್ನ ಸೇವೆಯನ್ನು ಕರ್ತವ್ಯವೆಂದು ಭಾವಿಸಿದವರು. ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಸಮನ್ವಯಾಧಿಕಾರಿ ನವೀನ್ ವೇಗಸ್ ಹಾರೈಸಿದರು.
ಸುಮಾರು 31 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಹಾರಾಡಿ ಶಾಲಾ ಹಿರಿಯ ಶಿಕ್ಷಕಿ ಗಂಗಾವತಿ ಪಿ ರೈ ಅವರ ವಿದಾಯ ಸಮಾರಂಭ ಎಂಡಿಎಸ್ ಸಭಾಭವನದಲ್ಲಿ ಜರುಗಿತು.
ಗಂಗಾವತಿ ಅವರು ಸದಾ ಲವಲವಿಕೆಯಿಂದ ಕೂಡಿದೆ ವ್ಯಕ್ತಿಯಾಗಿದ್ದು ಸಂಘಟನೆಯಲ್ಲಿ ತೊಡಗಿ ಕೊಂಡರು ಕೂಡ ಶಾಲಾ ಅವಧಿಯಲ್ಲಿ ತೊಂದರೆ ಆಗದಂತೆ ಇದ್ದವರು. ಯುವಕರಿಗೂ ಕೂಡ ಸ್ಪೂರ್ತಿಯಾಗುವಂತಹ ಲವಲವಿಕೆ ಅವರದ್ದಾಗಿತ್ತು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ನಾಗೇಶ್ ಪಾಟಾಳಿ ಅವರು ಹೇಳಿದರು.
ಮುಖ್ಯ ಶಿಕ್ಷಕರಾದ ಕೆಕೆ ಮಾಸ್ತರ್ ಅವರು ಶಿಕ್ಷಕಿ ಗಂಗಾವತಿ ಅವರ ಆದರ್ಶಗಳನ್ನು ಗುಣಗಾನ ಮಾಡಿದರು. ಶಿಕ್ಷಕರ ಪರವಾಗಿ ವನಿತಾ ಎ ಅವರು ಶಿಕ್ಷಕಿ ಅವರೊಂದಿಗಿನ ಒಡನಾಟಗಳ ನೆನಪನ್ನು ಹಂಚಿಕೊಂಡರು.
ನಗರ ಸಭಾ ಸದಸ್ಯ ಪ್ರೇಮಲತಾ ನಂದಿಲ ಮಾತನಾಡಿ “ಗಂಗಾವತಿ ಅವರು ಸದಾ ಶಾಲೆಯ ಒಳಿತಿಗಾಗಿ ಚಿಂತಿಸುತ್ತಿದ್ದವರು, ಅವರ ಪರಿಸರ ಕಾಳಜಿಯು ಅಪಾರವಾದುದು” ಎಂದರು. ಮತ್ತೋರ್ವ ನಗರ ಸಭಾ ಸದಸ್ಯ ದಿನೇಶ್ ಸೇವಿರೆ ಅವರು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಾವತಿ ಅವರು ತಾನು ಶಿಕ್ಷಕಿಯಾಗಿ ಮುಗ್ಧ ಮಕ್ಕಳ ಜೊತೆಗಿನ ಒಡನಾಟ ಪಡೆದು ಕೊಳ್ಳಲು ಪುಣ್ಯ ಮಾಡಿದ್ದು, ಹಾರಾಡಿಯಂತಹ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ತನ್ನ ಭಾಗ್ಯ. ಇದು ಬರೆ ಶಾಲೆಯಲ್ಲ ಸ್ವರ್ಗ, ಇಲ್ಲಿ ಮಕ್ಕಳನ್ನು ಸೇರಿಸಿದವರು ಪುಣ್ಯವಂತರು ಎಂದರು.
ದೈಹಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರಾದ ಸುಧಾಕರ ರೈ ಹಾಗೂ ಸಂಘಟನಾ ಕಾರ್ಯದರ್ಶಿ ರಾಮಣ್ಣ ರೈ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸನ್ಮಾನ:
31 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ 31 ರಂದು ನಿವೃತ್ತರಾದ ಗಂಗಾವತಿ ಪಿ ರೈ ಅವರನ್ನು ಶಿಕ್ಷಕ ವೃಂದದ ವತಿಯಿಂದ ಶಾಲು ಹೊದೆಸಿ ಫಲ ಪುಷ್ಪಗಳನ್ನಿತು ಸನ್ಮಾನಿಸಲಾಯಿತು. ಜೊತೆಗೆ ಎಸ್ ಡಿಎಂಸಿ ವತಿಯಿಂದ ಹಾಗೂ ಪೋಷಕರ ವತಿಯಿಂದ ಸನ್ಮಾನಿಸಲಾಯಿತು. ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕಿಗೆ ವಿವಿಧ ಕಾಣಿಕೆಗಳನ್ನಿತು ಆಶೀರ್ವಾದವನ್ನು ಪಡೆದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ವತಿಯಿಂದ ಅಧ್ಯಕ್ಷರಾದ ನಾಗೇಶ್ ಪಾಟಾಳಿಯವರ ನೇತೃತ್ವದಲ್ಲಿ ಸನ್ಮಾನ ನೆರವೇರಿಸಲಾಯಿತು. ಸುಧಾಕರ ರೈ ಹಾಗೂ ರಾಮಣ್ಣ ರೈ ಅವರು ಜೊತೆಗೂಡಿದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸ್ಥಾನದಿಂದ ತೆರವಾಗುತ್ತಿರುವ ಇಸ್ಮಾಯಿಲ್ ಬೊಳುವಾರು ಹಾಗೂ ಉದಯ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಎಸ್ ಡಿಎಂಸಿ ಅಧ್ಯಕ್ಷರಾದ ಸುಲೋಚನಿ ಅವರು ಶಿಕ್ಷಕಿ ಅವರ ಪರಿಸರ ಪ್ರೇಮ, ಸೇವಾ ಮನೋಭಾವವನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿಯರಾದ ಲಿಲ್ಲಿ ಡಿಸೋಜ, ಯಮುನಾ ಬಿ, ಹಾಗೂ ಸೆಲಿನ್ ಮಸ್ಕರೇನಸ್ ಹಾಗೂ ಶಿಕ್ಷಕ ಸಂಘದ ಸದಸ್ಯರಾದ ಶಾಂತಿ ಮೊರಾಸ್ ಹಾಗೂ ಲತಾ ಕುಮಾರಿ ಅವರು ಉಪಸ್ಥಿತರಿದ್ದರು.
ಜನಾರ್ಧನ ದುರ್ಗ ಹಾಗೂ ಶುಭಲತಾ ಕುಳ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಿರಿಯ ಶಿಕ್ಷಕಿ ಮಮತಾ ಸ್ವಾಗತಿಸಿ, ಆರತಿ ವಂದಿಸಿದರು. ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಹಕರಿಸಿದರು.