ಬೆಂಗಳೂರು: ಸಾಫ್ಟ್’ವೇರ್ ಇಂಜಿನಿಯರ್ ಮೇಘನಾ ಅವರಿಂದ ಕಥಕ್ ಏಕವ್ಯಕ್ತಿ ಪ್ರದರ್ಶನ ಫೆಬ್ರವರಿ 9ರಂದು ಸಂಜೆ 5.30ಕ್ಕೆ ಬೆಂಗಳೂರಿನ ಜಯನಗರದಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ಪ್ರಸ್ತುತಿಗೊಳ್ಳಲಿದೆ.
ಶಾಸ್ತ್ರೀಯ ನೃತ್ಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಮೇಘನಾ ಅವರು ವೃತ್ತಿಯಲ್ಲಿ ಡೆಲ್ ಸಂಸ್ಥೆಯ ಸಾಫ್ಟ್’ವೇರ್ ಇಂಜಿನಿಯರ್. ಅಭಿನವ ಡ್ಯಾನ್ಸ್ ಕಂಪೆನಿಯಲ್ಲಿ ಉಪನ್ಯಾಸಕಿಯೂ ಹೌದು.
ಮೇಘನಾ ವರದರಾಜು ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ವಿಶ್ವವಿಖ್ಯಾತ ನೃತ್ಯಪಟು ನಿರುಪಮಾ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ ಅವರ ಗರಡಿಯಲ್ಲಿ ಭರತನಾಟ್ಯ ಮತ್ತು ಕಥಕ್ ನೃತ್ಯಗಳನ್ನು ಅಭ್ಯಸಿಸಿದ್ದಾರೆ.
ನಿರುಪಮಾ ಅವರ ಆಚಾರ್ಯತ್ವದಲ್ಲಿ ಪದ್ಮಭೂಷಣ ಡಾ॥ ಪದ್ಮಾ ಸುಬ್ರಹ್ಮಣ್ಯಂ ಅವರು ಆಯೋಜಿಸಿದ್ದ ನಾಟ್ಯಶಾಸ್ತ್ರದ ವಿಶೇಷ ನಡೆಗಳ ಸುಧಾರಿತ ತರಬೇತಿಯ 108 ಕರಣಗಳ ಕಮ್ಮಟದಲ್ಲಿ ಮೇಘನಾ ಪಾಲ್ಗೊಂಡಿದ್ದಾರೆ. ಹೆಸರಾಂತ ಗುರುಗಳಾದ ಪದ್ಮಭೂಷಣ ಕುಮುದಿನಿ ಲಾಖಿಯ, ನಾಹಿದ್ ಸಿದ್ದಿಕಿ ಮತ್ತು ಸುಭಾಷ್ ಚಂದ್ರ ಅವರಿಂದ ಕಥಕ್ ನೃತ್ಯದ ಉನ್ನತ ಹಂತದ ಕಲಾಪ್ರಾಕಾರ ಕರಗತ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಹಲವಾರು ಕಮ್ಮಟಗಳಲ್ಲೂ ಭಾಗವಹಿಸಿದ್ದಾರೆ.
ಅಭಿನವ ಡ್ಯಾನ್ಸ್ ಕಂಪೆನಿ ಮೂಲಕ ಅನೇಕ ಕಥಕ್ ಅಭ್ಯಾಸಿಗಳಿಗೆ ತರಬೇತಿ ನೀಡಿದ್ದಾರೆ.
ಯುವಿಸಿಇಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಮತ್ತು ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಇನ್‌ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.