tamanvi
ಧಾರ್ಮಿಕ

ಪುತ್ತೂರಿನಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ವಾರ್ಷಿಕೋತ್ಸವ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಪುತ್ತೂರು ವಲಯ ಹಾಗೂ ವಿವಿಧ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ವಾರ್ಷಿಕೋತ್ಸವ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿದರು, ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಾದರೆ ದೇಶವೂ ಅಭಿವೃದ್ಧಿಯಾಗುತ್ತದೆ, ಮದ್ಯವರ್ಜನೆ ಹಾಗೂ ಕುಟುಂಬ ಜವಾಬ್ದಾರಿಗಳ ಬಗ್ಗೆ ಗ್ರಾಮಾಭಿವೃದ್ಧಿ ಯೋಜನೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಸರ್ಕಾರದಿಂದ ಮಹಿಳೆಯರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವು ಹಾಗೂ ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಗ್ರಾಮಾಭಿವೃದ್ಧಿ ಯೋಜನೆ ದ.ಕ. ಬಿ.ಸಿ. ಟ್ರಸ್ಟ್ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ಯೋಜನೆಯ ಮೂಲಕ ಸಾವಿರಾರು ಕುಟುಂಬಗಳು ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತಿವೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಲಕ್ಷಾಂತರ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿತಾಯದ ಮೂಲಕ ಸಮಾಜದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದರು.

ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಯೋಜನೆಯು ಸಮಾಜದಲ್ಲಿ ದುಶ್ಚಟಗಳಿಗೆ ಒಳಗಾದವರ ಮನಪರಿವರ್ತನೆಗೆ ನೆರವಾಗುತ್ತಿದೆ ಎಂದು ಹೇಳಿದರು. ವಕೀಲರಾದ ಹರಿಣಾಕ್ಷಿ ಜೆ. ಶೆಟ್ಟಿ ಮಾತನಾಡಿ, ‘ನಾನು’ ಎಂಬ ಭಾವ ತೊಲಗಿದಾಗ ಮಾತ್ರ ಆತ್ಮೋನ್ನತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಯೋಜನೆಯ ಒಕ್ಕೂಟದ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಫಲಾನುಭವಿಗಳಿಗೆ ಸಂಪೂರ್ಣ ಸುರಕ್ಷಾ ಯೋಜನೆ ಮಂಜೂರಾತಿ ಪತ್ರ, ಬ್ಯಾಂಕ್ ಸಾಲದ ಪತ್ರ ಹಾಗೂ ವಿಮಾ ಯೋಜನೆ ಪತ್ರಗಳನ್ನು ಹಸ್ತಾಂತರಿಸಲಾಯಿತು. ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts