ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನ ಬಳಿಯ ಪುತ್ತೂರು ಸೆಂಟರ್ ಹಿಂಭಾಗದಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ಮೇ 10, 11ರಂದು ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳಿಕೃಷ್ಣ ಹಸಂತ್ತಡ್ಕ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಬಂಗ ಅರಸರ ಸಾಮ್ರಾಜ್ಯದ ಆರಾಧ್ಯ ದೇವಿ ಪದ್ಮಾವತಿ ಎಂಬ ಖ್ಯಾತಿಯ ಪನ್ನಗ ಕನ್ನಿಕಾದೇವಿ. ಬಂಗ ಅರಸರು ತೆರಿಗೆ ಸಂಗ್ರಹ, ನ್ಯಾಯದಾನ, ನ್ಯಾಯಯುತವಾಗಿ ಅಧಿಕಾರ ನಡೆಸಲು ಪುತ್ತೂರನ್ನು ಆಡಳಿತ ಕೇಂದ್ರವಾಗಿ ಮಾಡಿಕೊಂಡಿದ್ದರು. ಇದರ ಪಕ್ಕದಲ್ಲೇ ಅಂದರೆ ಕಿಲ್ಲೆ ಮೈದಾನದ ಪಕ್ಕದಲ್ಲಿ ತಮ್ಮ ಆರಾಧ್ಯ ದೇವಿಯನ್ನು ಪ್ರತಿಷ್ಠಾಪಿಸಿ, ಆರಾಧನೆ ಮಾಡಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಆಡಳಿತ ಅವನತಿ ಅಂಚಿಗೆ ತಲುಪಿದ್ದು, ದೇವಿಯ ಆರಾಧನೆ ನಿಧಾನವಾಗತೊಡಗಿತು. ಸುಮಾರು 75 ವರ್ಷಗಳ ಮೊದಲು ಅಂದರೆ 1949ರಲ್ಲಿ ಸಾರಸ್ವತ ಬ್ರಾಹ್ಮಣರ ಮನೆಯಲ್ಲಿ ದಿನನಿತ್ಯ ನಡೆಯುತ್ತಿದ್ದ ಆರಾಧನೆ, ಭಜನಾ ಸಂಕೀರ್ತನೆಗೆ ಮೆಚ್ಚಿಕೊಂಡು, ದೇವಿ – ”ನಾನು ನಿಮ್ಮ ಮನೆಗೆ ಬರಲೇ?” ಎಂದು ಮೂರು ಬಾರಿ ಕೇಳಿ, ಮನೆ ಯಜಮಾನಿ ರಾಧಾಬಾಯಿ ಅವರ ಭಕ್ತಿಗೆ ಮೆಚ್ಚಿ ಆರಾಧನೆ ಪಡೆದುಕೊಂಡಿತು ಎಂಬುದು ಪ್ರತೀತಿ ಎಂದು ವಿವರಿಸಿದರು.
ರಾಜ್ಯದ ಮೂಲೆ ಮೂಲೆಯ ಜನರು ಇಲ್ಲಿಗೆ ಬಂದು ಕುಂಕುಮ ಪ್ರಸಾದ ಸ್ವೀಕರಿಸಿ, ಉನ್ನತ ಸ್ಥಾನ ಮಾನ ಅಲಂಕರಿಸಿದ ಉದಾಹರಣೆಯಿದೆ. ಈ ಸ್ಥಳದ ಬಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಸಂದರ್ಭವೂ ಪ್ರಸ್ತಾವಿತವಾಗಿದ್ದು, ಹತ್ತೂರಿನವರು ಸೇರಿ ಆರಾಧನೆ ಮಾಡಬೇಕು ಎಂದು ಕಂಡುಬಂದಿತ್ತು. ಈ ಸನ್ನಿಧಾನದಲ್ಲೂ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು, ಅದರ ಪ್ರಕಾರ ಸಮಸ್ತ ಪ್ರಾಯಶ್ಚಿತಗಳನ್ನು ಮಾಡಿ, ಈ ಸ್ಥಳದ ಜೀರ್ಣೋದ್ಧಾರಕ್ಕಾಗಿ ಮುಂದಡಿಯಿಟ್ಟಿದ್ದೇವೆ ಎಂದರು.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ಬನ್ನಂಜೆ ರಾಮದಾಸ್ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಮೇ 10ರಂದು ಬೆಳಿಗ್ಗೆ 9 ಗಂಟೆಗೆ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ನಿಧಿಕುಂಭ ಮೆರವಣಿಗೆ ಹೊರಡಲಿದೆ. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಮುಂಭಾಗವಾಗಿ ಕಿಲ್ಲೆ ಮೈದಾನ ರಸ್ತೆ ಪ್ರವೇಶಿಸಿ ಪುತ್ತೂರು ಸೆಂಟರ್ ಹಿಂಭಾಗದಲ್ಲಿರುವ ಪುತ್ತೂರು ಶ್ರೀ ಮಹಾಕಾಳಿ ದೇವಿ ಸಾನಿಧ್ಯ ತಲುಪಲಿದೆ.
ಮೇ 11ರಂದು ಬೆಳಿಗ್ಗೆ 8.26ರಿಂದ ಷಡಾಧಾರ ಮತ್ತು ನಿಧಿಕುಂಭ ಪ್ರತಿಷ್ಠೆ, ಸಭಾ ಕಾರ್ಯಕ್ರಮ, ದೇವಸ್ಥಾನದ ಅಭಿವೃದ್ಧಿಗೆ ನಿಧಿ ಸಂಗ್ರಹ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪುತ್ತೂರಿನ ಸಮಸ್ತ ಬಂಧು ಬಾಂಧವರು ತಮ್ಮ ಅನುಕೂಲಕ್ಕೆ ಅನುಸಾರವಾಗಿ ಚಿನ್ನ / ಬೆಳ್ಳಿ, ನಾಣ್ಯ, ಮುಷ್ಠಿ ಕಾಣಿಕೆ, ನವರತ್ನ, ತಾಮ್ರದ ನಾಣ್ಯ ಸಮರ್ಪಿಸಲು ಅವಕಾಶ ನೀಡಲಾಗಿದೆ ಎಂದು ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ಕಾಮತ್, ಉಪಾಧ್ಯಕ್ಷರಾದ ನರೇಂದ್ರ ನಾಯಕ್, ಸುದೇಶ್ ಚಿಕ್ಕಪುತ್ತೂರು, ಖಜಾಂಚಿ ನಿತಿನ್ ಮಂಗಳ ಉಪಸ್ಥಿತರಿದ್ದರು.