ಪುತ್ತೂರು: ಏ.10 ರಿಂದ ಏ.20ರ ತನಕ ವಿಜೃಂಭಣೆಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರವನ್ನು ಮಾ.12ರಂದು ಶ್ರೀ ದೇವರ ನಡೆಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸಲಾಯಿತು.
ವರ್ಷಾವದಿ ಜಾತ್ರೆಗೆ ಸಂಬಂಧಿಸಿ ಏ. 1ರಂದು ನಡೆಯುವ ಗೊನೆ ಮುಹೂರ್ತದಿಂದ ಹಿಡಿದು ಜಾತ್ರೆ ಸಂಪನ್ನಗೊಳ್ಳುವಲ್ಲಿ ಶ್ರೀ ದೇವರು ಯಶಸ್ವಿಯಾಗಿ ನಡೆಸಿಕೊಡುವಂತೆ ಮತ್ತು ಜಾತ್ರೆಯ ಸಂದರ್ಭ ಅನ್ನದಾನ ಅಕ್ಷಯವಾಗಿ ಬೆಳಗುವಂತೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ದೇವರ ಪೂರ್ಣಾನುಗ್ರಹ ಸಿಗುವಂತೆ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಜಾತ್ರೆಯ ಆಮಂತ್ರಣ ಪತ್ರವನ್ನು ಶ್ರೀ ದೇವರ ಗರ್ಭಗುಡಿಯಲ್ಲಿಟ್ಟು ಪ್ರಾರ್ಥಿಸಿ ದೇವಳದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ಈಶ್ವರ ಬೇಡೆಕರ್, ದೇವಳದ ಪ್ರಧಾನ ಅರ್ಚಕರೂ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಸಂತ ಕೆದಿಲಾಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
*ಬ್ರಹ್ಮರಥೋತ್ಸವದ ಪ್ರಥಮ ಸೇವಾ ರಶೀದಿಗೆ ಚಾಲನೆ:*
ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ವಿವಿಧ ಪ್ರಮುಖ ಸೇವೆಗಳನ್ನು ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಏ.17ರಂದು ಬ್ರಹ್ಮರಥೋತ್ಸವ ಸೇವೆಗೆ ರೂ. 25 ಸಾವಿರ, ಏ 16ಕ್ಕೆ ಸಣ್ಣರಥೋತ್ಸವ ಸೇವೆಗೆ ರೂ. 15 ಸಾವಿರ, ಏ.16ಕ್ಕೆ ವಿಶೇಷ ಪಾಲಕಿ ಸೇವೆಗೆ ರೂ. 15 ಸಾವಿರ, ಗರ್ಭಗುಡಿ ಪುಷ್ಪಾಲಂಕಾರ ಸೇವೆಗೆ ರೂ.10 ಸಾವಿರ, ಗುಡಿಗಳಿಗೆ ಪುಷ್ಪಾಲಂಕಾರ ಸೇವೆಗೆ ರೂ. 5 ಸಾವಿರ, ಲಡ್ಡು ಪ್ರಸಾದ ರೂ. 50 ಮತ್ತು ಅನ್ನದಾನ ಸೇವೆ, ಶಾಶ್ವತ ಸೇವೆಗೆ ಅವಕಾಶ ನೀಡಲಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಬ್ರಹ್ಮರಥೋತ್ಸವದ ಸೇವೆಗೆ ಪ್ರಥಮ ರಶೀದಿಯನ್ನು ಪಡೆದು ಚಾಲನೆ ನೀಡಿದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ಪೇಟೆಯಲ್ಲಿ ಆಮಂತ್ರಣ ಪತ್ರವನ್ನು ವಿತರಿಸುವ ನಿಟ್ಟಿನಲ್ಲಿ ಮಾ.13ರಿಂದ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸಮಿತಿಗಳನ್ನು ರಚಿಸಿಕೊಂಡು ಪೇಟೆಯಲ್ಲಿ ಆಮಂತ್ರಣ ವಿತರಣೆ ಮಾಡಲಿದ್ದಾರೆ.