ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಈ ಯುದ್ಧದ ಸಮಯದಲ್ಲಿ ಗರಿಷ್ಠ ಸಂಯಮವನ್ನು ಕಾಯ್ದುಕೊಳ್ಳುವಂತೆ ಏಳು ರಾಷ್ಟ್ರಗಳ ಗುಂಪು (G7) ಒತ್ತಾಯಿಸಿವೆ. ಮಾತುಕತೆಯ ಮೂಲಕ ತಮ್ಮ ಮಿಲಿಟರಿ ಸಂಘರ್ಷದ ಉಲ್ಬಣವನ್ನು ತಕ್ಷಣವೇ ಕಡಿಮೆ ಮಾಡಬೇಕೆಂದು ಕರೆ ನೀಡಿವೆ.
ಪರಮಾಣು ಶಸ್ತ್ರಸಜ್ಜಿತ ನೆರೆಹೊರೆ ದೇಶಗಳ ನಡುವಿನ ಮಿಲಿಟರಿ ಮುಖಾಮುಖಿ ನಿರಂತರವಾಗಿ ಉಲ್ಬಣಗೊಳ್ಳುತ್ತಿರುವ ಮಧ್ಯೆ ಜಿ7 ಪ್ರಬಲ ಗುಂಪಿನಿಂದ ಈ ಕರೆ ಬಂದಿದೆ.
ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ತ್ವರಿತ ಮತ್ತು ಶಾಶ್ವತ ರಾಜತಾಂತ್ರಿಕ ಪರಿಹಾರಕ್ಕಾಗಿ ನಮ್ಮ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಜಿ7 ಹೇಳಿದೆ. ಮತ್ತಷ್ಟು ಮಿಲಿಟರಿ ಉಲ್ಬಣವು ಪ್ರಾದೇಶಿಕ ಸ್ಥಿರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ ಎಂದು ಜಿ7 ದೇಶಗಳ ವಿದೇಶಾಂಗ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾವು, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುಎಸ್‌ನ ಜಿ7 ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿಗಳು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಯಿಂದ ಗರಿಷ್ಠ ಸಂಯಮವನ್ನು ಕೋರುತ್ತೇವೆ ಎಂದು ಗುಂಪು ಹೇಳಿಕೆಯಲ್ಲಿ ತಿಳಿಸಿದೆ.