ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಉಪನ್ಯಾಸಕಿ ಉಷಾ ಕೆ.ವಿ ಅವರ “ವೇದಾಂತ” ಮತ್ತು “ಸ್ಪಂದನ” ಕೃತಿಗಳ ಬಿಡುಗಡೆ ಸಮಾರಂಭ ಶನಿವಾರ ಸಂಜೆ ಅನುರಾಗ ವಠಾರದಲ್ಲಿ ನಡೆಯಿತು.ಕಾರ್ಯಕ್ರಮವು ಲೇಖಕಿಯ ಮೊಮ್ಮಕ್ಕಳಾದ ಸಾಧ್ವಿ, ತನಿಶಿ, ಅಕ್ಷಜ್ ಹಾಗೂ ಪುಟಾಣಿ ಅಗಸ್ತ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಪುಟಾಣಿ ಮಕ್ಕಳು ವೇದಿಕೆಗೆ ಬಂದು ಅತಿಥಿಗಳಿಗೆ ಕನ್ನಡದ ಶಾಲು ಹೊದಿಸಿ ಸ್ಮರಣಿಕೆಗಳನ್ನು ಅರ್ಪಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಸಕ್ರಿಯ ಭಾಗವಹಿಸುವಿಕೆ ಗಮನ ಸೆಳೆಯಿತು ಕರ್ನಾಟಕ ಸಂಘದ ಅಧ್ಯಕ್ಷರಾದ ಪುರಂದರ ಭಟ್ ದೀಪಪ್ರಜ್ವಲನೆ ನೆರವೇರಿಸಿ ಮಾತನಾಡಿ, ಉಷಾ ಕೆ.ವಿ ಅವರ ಕೃತಿಗಳು ಶೈಕ್ಷಣಿಕ ಮೌಲ್ಯಗಳನ್ನು ಒಳಗೊಂಡಿದ್ದು ಪಠ್ಯಮಟ್ಟದ ಅಧ್ಯಯನಕ್ಕೂ ಯೋಗ್ಯವಾಗಿವೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಪ್ರೊ. ಹರಿ ನಾರಾಯಣ ಮಾಡಾವು ಅವರು “ವೇದಾಂತ” ಕೃತಿಯನ್ನು ಅನಾವರಣಗೊಳಿಸಿ, ವೇದಗಳ ಸಾರಾಂಶವನ್ನು ಸರಳವಾಗಿ ಹೊಸ ಓದುಗರಿಗೂ ಅರ್ಥವಾಗುವಂತೆ ವಿವರಿಸಿರುವುದು ಕೃತಿಯ ವಿಶೇಷತೆ ಎಂದರು. ಪ್ರೊ. ಬಿ.ವಿ. ಸೂರ್ಯನಾರಾಯಣ ಅವರು “ಸ್ಪಂದನ” ಕೃತಿಯನ್ನು ಬಿಡುಗಡೆ ಮಾಡಿ, ಸನಾತನ ಸಂಸ್ಕೃತಿಯ ವೈಭವವನ್ನು ಸಮಕಾಲೀನ ಸಮಾಜಕ್ಕೆ ತಲುಪಿಸುವ ಲೇಖಕಿಯ ಪ್ರಯತ್ನವನ್ನು ಶ್ಲಾಘಿಸಿದರು.
‘ಆಯುರ್ವೇದದಲ್ಲಿ ಯೋಗ’ ವಿಷಯವಾಗಿ ಕೋಡಿಂಬಾಡಿಯ ಅತ್ರಿವನ ಆಯುರ್ವೇದಿಕ್ ಆಸ್ಪತ್ರೆಯ ಮುಖ್ಯಸ್ಥ ಡಾ. ದತ್ತಾತ್ರೇಯ ಅವರು ಉಪನ್ಯಾಸ ನೀಡಿ, ಯೋಗ ಮತ್ತು ಆಯುರ್ವೇದ ಪರಸ್ಪರ ಪೂರಕವಾಗಿದ್ದು ಆರೋಗ್ಯಕರ ಜೀವನಶೈಲಿಗೆ ಅವುಗಳ ಮಹತ್ವವನ್ನು ವಿವರಿಸಿದರು.ಕೃತಿಕಾರರಾದ ಉಷಾ ಕೆ.ವಿ ಅವರು ತಮ್ಮ ಭಾಷಣದಲ್ಲಿ ವೇದಗಳ ಮಹತ್ವ ಹಾಗೂ “ವೇದಾಂತ” ಕೃತಿಯ ರಚನೆಗೆ ಪ್ರೇರಣೆಯಾದ ಹಿನ್ನೆಲೆಯನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ್ ನಾಯಕ್ ವಹಿಸಿದ್ದರು. ಸ್ವಾಗತ ಭಾಷಣವನ್ನು ಡಾ. ದೃತಿ ನೀಡಿದರು. ಕಾರ್ಯಕ್ರಮವನ್ನು ರಮೇಶ್ ನಾಯಕ್ ನಿಡ್ಯ ನಿರೂಪಿಸಿ, ವನಮಾಲಿ ಭಟ್ ವಂದನಾರ್ಪಣೆ ಸಲ್ಲಿಸಿದರು.ಸಾಹಿತ್ಯಾಸಕ್ತರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭವು ನೆರವೇರಿತು.





















