ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಪ್ರಯುಕ್ತ ಪುತ್ತೂರಿಗೆ ಆಗಮಿಸುತ್ತಿರುವ ಕಾರ್ಗಿಲ್ ಯೋಧ, ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಡಿಸೆಂಬರ್ 27ರಂದು ಅಪರಾಹ್ನ 2 ಗಂಟೆಯಿಂದ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ.
ಈ ಸಂವಾದ ಕಾರ್ಯಕ್ರಮದಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾಗಲು ಮಾಡಬೇಕಾದ ತಯಾರಿ ಬಗೆಗೆ ಲೆಫ್ಟಿನೆಂಟ್ ಸಂಜಯ್ ಕುಮಾರ್ ಮಾರ್ಗದರ್ಶನ ನೀಡಲಿದ್ದಾರೆ.
ಸಂಜಯ್ ಕುಮಾರ್ ಅವರು ಪ್ರಸ್ತುತ ಪುಣೆಯ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಹಲವು ಮಕ್ಕಳು ಎನ್‌ಡಿಎಗೆ ಆಯ್ಕೆಯಾಗುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಜಯ್ ಕುಮಾರ್ ಅವರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ದೇಹಕ್ಕೆ ಶತ್ರುಗಳ ಗುಂಡು ಹೊಕ್ಕಿದ್ದರೂ ನೇರಾನೇರ ದೈಹಿಕ ಹೋರಾಟ ನಡೆಸಿ ಹಲವು ವೈರಿ ಸೈನಿಕರನ್ನು ಕೊಂದು ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಜತೆಗೆ ಪರಮವೀರ ಚಕ್ರ ಪ್ರಶಸ್ತಿ ಪಡೆದಿರುವ ಅಸೀಮ ಸಾಹಸಿ ಯೋಧನೆನಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾಗುವ ಬಗೆಗಿನ ಅವರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ನೀಡಲಿದೆ.
ಈಗಾಗಲೇ ಈ ಸಂವಾದ ಕಾರ್ಯಕ್ರಮಕ್ಕೆ ಹಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದು, ಮತ್ತಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಸಂವಾದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮುಕ್ತವಾಗಿರಿಸಲಾಗಿದೆ. ವಿದ್ಯಾರ್ಥಿ ಹೆತ್ತವರೂ ಈ ಸಂವಾದದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಎನ್‌ಡಿಎ ಪರೀಕ್ಷೆಗಳ ಬಗೆಗಿನ ಯಾವುದೇ ಪ್ರಶ್ನೆಗಳು, ಭಾರತೀಯ ಸೇನೆಯ ಕುರಿತಾದ ವಿವಿಧ ಮಾಹಿತಿಗಳನ್ನು ಈ ಸಂವಾದದ ಮೂಲಕ ವಿದ್ಯಾರ್ಥಿಗಳು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾಗುವ ಬಗೆಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಿಂದಲೇ ಮಾರ್ಗದರ್ಶನ ದೊರೆಯುತ್ತಿರುವುದು ಈ ಭಾಗದ ವಿದ್ಯಾರ್ಥಿಗಳ ಅದೃಷ್ಟ ಎನಿಸಿಕೊಂಡಿದೆ.
ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ಬೆಳಗ್ಗೆ 9 ಗಂಟೆಗೆ ದರ್ಬೆ ವೃತ್ತದ ಬಳಿಯಿಂದ ಮೆರವಣಿಗೆ ಮೂಲಕ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನಕ್ಕೆ ಕರೆತರಲಾಗುತ್ತಿದೆ. ತದನಂತರ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ. ಆಗಮಿಸಿದ ಎಲ್ಲರಿಗೂ ಭೋಜನ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಭೋಜನದ ನಂತರ ಈ ಸಂವಾದ ಕಾರ್ಯಕ್ರಮ ಜರಗಲಿದೆ.


























