ಕರಾವಳಿ

ಕರಾವಳಿಯ ಮಳೆಮಾಪನಗಳ ತುರ್ತು ದುರಸ್ತಿಗೆ ಎಂ.ಎಲ್.ಸಿ. ಕಿಶೋರ್ ಕುಮಾರ್ ಪುತ್ತೂರು ಪತ್ರ

GL

ಈ ಸುದ್ದಿಯನ್ನು ಶೇರ್ ಮಾಡಿ

ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಫಸಲ್ ಬಿಮಾ’ (ಹವಾಮಾನ ಆಧಾರಿತ ಬೆಳೆ ವಿಮೆ) ಯೋಜನೆಯಡಿ ಹವಾಮಾನ ವೈಪರೀತ್ಯದಿಂದ ಬೆಳೆ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳಲ್ಲಿ ಕೆಟ್ಟುಹೋಗಿರುವ ಮಳೆಮಾಪನಗಳನ್ನು ಮುಂಗಾರಿಗೂ ಮುನ್ನ ತುರ್ತಾಗಿ ಪರಿಶೀಲಿಸಿ ದುರಸ್ತಿಪಡಿಸುವಂತೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

maithri

ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕರಾವಳಿ ಭಾಗದ ರೈತರ ಪರವಾಗಿ ತೀವ್ರ ಕಳವಳ ವ್ಯಕ್ತಪಡಿಸಿರುವ ಶಾಸಕರು, ಬೆಳೆ ವಿಮೆ ಯೋಜನೆಯಡಿ ಪರಿಹಾರ ಒದಗಿಸಲು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಲಾದ ಮಳೆಮಾಪನಗಳಲ್ಲಿ ದಾಖಲಾಗುವ ಮಳೆಯ ಪ್ರಮಾಣವೇ ಪ್ರಮುಖ ಆಧಾರವಾಗಿದೆ ಎಂದು ವಿವರಿಸಿದ್ದಾರೆ.

ಕಳೆದ ಬಾರಿ ಭಾರಿ ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿ ರೈತರ ಬೆಳೆಗಳು ಸಂಪೂರ್ಣ ಹಾನಿಗೀಡಾಗಿದ್ದರೂ, ರೈತರಿಗೆ ಅತ್ಯಂತ ಕಡಿಮೆ ವಿಮಾ ಪರಿಹಾರ ಬಂದಿದೆ. ಇದಕ್ಕೆ ಆಯಾ ಗ್ರಾಮಗಳಲ್ಲಿ ಅಳವಡಿಸಲಾದ ಮಳೆಮಾಪನಗಳು ಸಮರ್ಪಕ ನಿರ್ವಹಣೆಯಿಲ್ಲದೆ ಕೆಟ್ಟು ಹೋಗಿರುವುದು ಮತ್ತು ನಿಖರವಾದ ಮಳೆಯ ಪ್ರಮಾಣವನ್ನು ದಾಖಲಿಸುವಲ್ಲಿ ವಿಫಲವಾಗಿರುವುದೇ ನೇರ ಕಾರಣವಾಗಿದೆ. ಮಾಪನಗಳ ಈ ದೋಷದಿಂದಾಗಿ ರೈತರಿಗೆ ಬಹುದೊಡ್ಡ ಮಟ್ಟದ ಆರ್ಥಿಕ ಅನ್ಯಾಯವಾಗಿದೆ. ಈ ಗಂಭೀರ ವಿಚಾರವನ್ನು ತಾವು ಇತ್ತೀಚೆಗೆ ವಿಧಾನ ಪರಿಷತ್ತಿನ ಕಲಾಪದಲ್ಲಿಯೂ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆದ್ದರಿಂದ, ಮುಂಬರುವ ಮುಂಗಾರು ಮಳೆ ಆರಂಭವಾಗುವ ಮೊದಲೇ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಳೆಮಾಪನ ಕೇಂದ್ರಗಳನ್ನು ತಕ್ಷಣವೇ ಪರಿಶೀಲಿಸಬೇಕು ಹಾಗೂ ಕೆಟ್ಟುಹೋಗಿರುವ ಮಾಪನಗಳನ್ನು ಕೂಡಲೇ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜೊತೆಗೆ, ಈ ಮಳೆಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು, ಪ್ರತಿ ಮಾಪನದಲ್ಲಿ ದಾಖಲಾದ ಮಳೆಯ ವಿವರವನ್ನು ಆಯಾ ಗ್ರಾಮ ಪಂಚಾಯತ್‌ಗೆ ಕಡ್ಡಾಯವಾಗಿ ಪ್ರತಿ ವಾರ ವರದಿಯ ರೂಪದಲ್ಲಿ ನೀಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

ಈ ಪತ್ರದ ಪ್ರತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ನಿರ್ದೇಶಕರಿಗೆ, ಎರಡೂ ಜಿಲ್ಲೆಗಳ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ತೋಟಗಾರಿಕೆ ಉಪನಿರ್ದೇಶಕರಿಗೆ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿರ್ದೇಶಕರಿಗೂ ರವಾನಿಸಲಾಗಿದೆ.

ಶಾಸಕರ ಪತ್ರಕ್ಕೆ ಶೀಘ್ರವಾಗಿ ಸ್ಪಂದಿಸಿದ ಉಡುಪಿ ಜಿಲ್ಲಾಧಿಕಾರಿ:

ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಪತ್ರ ಬರೆದ ಕೇವಲ 2 ದಿನಗಳಲ್ಲಿಯೇ ಉಡುಪಿ ಜಿಲ್ಲಾಧಿಕಾರಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ KSNDMC ವತಿಯಿಂದ ಈಗಾಗಲೇ ಅಳವಡಿಸಲಾದ ಸ್ವಯಂಚಾಲಿತ ಮಳೆಮಾಪನಗಳ ಸಮರ್ಪಕ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಗಾವಹಿಸುವ ಜವಾಬ್ದಾರಿಯನ್ನು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಆಡಳಿತ ಅಧಿಕಾರಿಗೆ ವಹಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಅಥವಾ ಕಾರ್ಯನಿರ್ವಹಿಸದ ಮಳೆಮಾಪನಗಳ ಸ್ಥಿತಿಗತಿಯ ಬಗ್ಗೆ ಈಗಾಗಲೇ KSNDMC ನಿರ್ದೇಶಕರ ಗಮನಕ್ಕೆ ತರಲಾಗಿದ್ದು, ಅವುಗಳ ದುರಸ್ತಿಗೆ ಸರ್ಕಾರದಿಂದ ಅಗತ್ಯ ಕ್ರಮ ವಹಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ 38 ಮಳೆಮಾಪನಗಳನ್ನು ಹೊಸದಾಗಿ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂಬ ಸಮಾಧಾನಕರ ವಿಚಾರವನ್ನು ಜಿಲ್ಲಾಧಿಕಾರಿಗಳು ತಮ್ಮ ಪ್ರತ್ಯುತ್ತರ ಪತ್ರದಲ್ಲಿ ಶಾಸಕರಿಗೆ ಖಚಿತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ನಲ್ಲಿ ಜಿಯೋ ಡಿಜಿಟಲ್ ಸಂಪರ್ಕ ಬಲವರ್ಧನೆ: ಜಿಯೋ ಮೊಬೈಲ್ ಟವರ್ ಉದ್ಘಾಟನೆ

ಉಜಿರೆ: ಬೆಳ್ತಂಗಡಿ ಬಳಿ ರೆಂಕೆದಗುತ್ತು ಎಂಬಲ್ಲಿರುವ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್…