ಬೆಂಗಳೂರಿನ ಹುಣಸಮಾರನಹಳ್ಳಿ ಮಠದ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಅತ್ಯಾಚಾರದ ಆರೋಪ ಹೊರಿಸಿ ಯುವತಿ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಬೆಂಗಳೂರಿನ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು, ತಕ್ಷಣವೇ ಆರೋಪಿ ಸ್ವಾಮೀಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ ಹಾಗೂ ವಂಚಿಸಿದ ಆರೋಪ ಸ್ವಾಮೀಜಿ ವಿರುದ್ಧ ಕೇಳಿಬಂದಿದೆ.
ನೂರಾರು ಕೋಟಿ ಜಮೀನು ಮಾಲೀಕತ್ವ ಹೊಂದಿರುವ ವೀರಶೈವ ಸಮುದಾಯದ ಹುಣಸಮಾರನಹಳ್ಳಿಮಠವು ವೀರಶೈವ ಲಿಂಗಾಯತ ಸಮುದಾಯದ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಮಠದ ಶಾಖಾ ಮಠವಾಗಿದೆ.
ಇದಕ್ಕೂ ಮೊದಲು, ಅಂದರೆ 2017ರ ಅಕ್ಟೋಬರ್‌ನಲ್ಲೂ ಸಹ ಸ್ವಾಮೀಜಿಯವರ ವಿರುದ್ಧ ಇದೇ ರೀತಿಯಾಗಿ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹಾಗೂ ದೈಹಿಕ ಸಂಪರ್ಕದ ಆರೋಪಗಳು ಕೇಳಿಬಂದಿದ್ದು, ಆ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಭಕ್ತರು ಮಠದ ಮುಂದೆ ಪ್ರತಿಭಟನೆ ನಡೆಸಿ ಅವರನ್ನು ಕೆಳಗಿಳಿಸುವಂತೆ ಆಗ್ರಹಿಸಿದ್ದರು.























