ಪುತ್ತೂರು: ವೈದ್ಯರ ಮನೆಯೊಂದರಿಂದ ಕಳವು ಮಾಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಬಪ್ಪಳಿಗೆ ಸಿಂಗಾಣಿ ನಿವಾಸಿ ಸುರೇಶ್ (47ವ) ಬಂಧಿತ ಆರೋಪಿ.ಉರ್ಲಾಂಡಿ ಕಸಬಾ ಗ್ರಾಮದ ಸುಶ್ರುತ ಆಸ್ಪತ್ರೆಯ ಬಳಿಯ ಡಾ.ವೆಂಕಟರಮಣ ಭಟ್ ಅವರ ಮನೆಯ ಹಂಚು ತೆಗೆದು ಒಳನುಗ್ಗಿ ನಗದು ಕಳವು ಮಾಡಿದ್ದ ಆರೋಪದಲ್ಲಿ ಈತನ ಬಂಧನವಾಗಿದೆ.
ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನಲ್ಲಿ ಕ್ಲಿನಿಕ್ ಹೊಂದಿರುವ ಡಾ.ವೆಂಕಟರಮಣ ಭಟ್ ಅವರು ಉರ್ಲಾಂಡಿಯಲ್ಲಿ ಸುಶ್ರುತ ಆಸ್ಪತ್ರೆಯ ಬಳಿ ಮನೆ ಹೊಂದಿದ್ದು ಈ ಮನೆಯಿಂದ 2025ರ ಡಿಸೆಂಬರ್ ತಿಂಗಳಲ್ಲಿ ನಗದು ಮತ್ತು ಬೆಳ್ಳಿಯ ಮೂರ್ತಿ ಕಳವಾಗಿತ್ತು.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಕಳೆದ ಏಪ್ರಿಲ್ ತಿಂಗಳಲ್ಲಿ ಮತ್ತೊಮ್ಮೆ ಅದೇ ಮನೆಯಿಂದ ನಗದು ಕಳವಾಗಿತ್ತು.
ಮೇ ತಿಂಗಳಲ್ಲಿ ಡಾ.ವೆಂಕಟರಮಣ ಭಟ್ ಅವರು ಉರ್ಲಾಂಡಿ ಮನೆಗೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಡಾ.ವೆಂಕಟರಮಣ ಭಟ್ ಅವರಿಗೆ ಸುಮಾರು 75 ವರ್ಷ ಪ್ರಾಯವಾಗಿರುವುದರಿಂದ ಅವರ ಪರವಾಗಿ ಸಂಬಂಧಿಕ ಪಾಣಾಜೆ ಗ್ರಾಮದ ಗಿಳಿಯಾಲು ನಿವಾಸಿ ಬಿ.ಕೆ.ಅವಿನಾಶ್ ಅವರು ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಎರಡು ಬಾರಿ ನಡೆದಿದ್ದ ಕಳವು ಪ್ರಕರಣದ ಪೈಕಿ ಒಂದು ಬಾರಿ ನಡೆದಿದ್ದ ಪ್ರಕರಣದ ಆರೋಪಿಯಾಗಿ ಸುರೇಶ್ ಬಂಧಿತನಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.






















