ಇರಾನ್ ನಡೆಸಿದ ದಾಳಿಗೆ ಪ್ರತಿಕಾರ ತೀರಿಸಲು ಇಸ್ರೇಲ್ ಮುಂದಾಗಿದ್ದು ಅದರಂತೆ ಇಂದು(ಅ. 26) ರಂದು ಮುಂಜಾನೆ ಇರಾನ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಆರಂಭಿಸಿದೆ.
ಕಳೆದ ಅಕ್ಟೋಬರ್ 1 ರಂದು ನಡೆದಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್ ನಲ್ಲಿ ಮಿಲಿಟರಿ ಮೇಲೆ ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ಆರಂಭಿಸಿದೆ.
ದಾಳಿಯಿಂದಾದ ಸಾವು ನೋವಿನ ಬಗ್ಗೆ ತಕ್ಷಣದ ಮಾಹಿತಿ ಸಿಕ್ಕಿಲ್ಲ. ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಡೆಸಲಾದ ನಿಖರವಾದ ದಾಳಿ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.
ಇರಾನ್ ಆಡಳಿತ ಮತ್ತು ಅದರ ಪ್ರಾಕ್ಸಿಗಳು ಅಕ್ಟೋಬರ್ 7 ರಿಂದ ಇರಾನ್ ನಿಂದ ನೇರ ದಾಳಿ ಸೇರಿದಂತೆ ಏಳು ಬಗೆಯ ದಾಳಿಗಳನ್ನು ಇಸ್ರೇಲ್ ಮೇಲೆ ಪಟ್ಟುಬಿಡದೆ ನಡೆಸುತ್ತಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೆ ತಿಳಿಸಿದೆ.
ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ, ಸ್ಫೋಟಗಳ ಸದ್ದು ಕೇಳಿಸುತ್ತಿತ್ತು, ಕೆಲವು ಶಬ್ದಗಳು ನಗರದ ಸುತ್ತಲಿನ ವಾಯು ರಕ್ಷಣಾ ವ್ಯವಸ್ಥೆಗಳಿಂದ ಬಂದವು ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಹೇಳಿವೆ.