ಸೋನಿ ಟಿವಿಯ ಈ ಬಾರಿಯ (ಹತ್ತನೇ ಆವೃತ್ತಿ) ಮಾಸ್ಟರ್ ಶೆಫ್ ಸ್ಪರ್ಧೆಗೆ ಕರ್ನಾಟಕದ ಗಡಿನಾಡಿನ ಕಾಸರಗೋಡು ಜಿಲ್ಲೆಯ ಅವನಿ ಶರ್ಮ ಹಾಗೂ ವೇಣು ಶರ್ಮ ಜೋಡಿ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ.
ಕರಾಡ ಬ್ರಾಹ್ಮಣ ಸಮುದಾಯದ ಕುದ್ಕುಳಿ ಮನೆತನದ ಅವನಿ ಶರ್ಮ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ, ಕಲಾ ನಿರ್ದೇಶಕಿಯಾಗಿ ಹಾಗೂ ಆಹಾರ ವಿನ್ಯಾಸಕಿಯಾಗಿಯೂ (ಫುಡ್ ಸ್ಟೈಲಿಸ್ಟ್) ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಲ್ಯದಿಂದಲೇ ಅಡುಗೆ ಪಾಕಗಳ ಆವಿಷ್ಕಾರಗಳನ್ನು ಮಾಡುತ್ತಾ, ಹೊಸ-ಹೊಸ ಕಲಾತ್ಮಕವಾದ ಪ್ರಯೋಗಗಳನ್ನು ಮಾಡಿರುತ್ತಾರೆ.
ಹಲವು ವರ್ಷಗಳಿಂದ *ಕರಾಡ ಸ್ಪೈಸ್ ಬಾಕ್ಸ್* ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿವಿಧ ಕರಾಡ ಶೈಲಿಯ ಸಸ್ಯಹಾರಿ ಅಡುಗೆಗಳನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. *ಕರಾಡ ಅಡುಗೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ತನ್ನ ಮುಖ್ಯ ಉದ್ದೇಶ ಎಂದು ಅವನಿ ಶರ್ಮಾ ಕುದ್ಕುಳಿ ತಿಳಿಸಿದ್ದಾರೆ.*
ಇವರೊಂದಿಗೆ ಜೋಡಿಯಾಗಿ ಸ್ಪರ್ಧಿಸುತ್ತಿರುವವರು ಅವನಿ ಶರ್ಮರ ತಂದೆ ವೇಣು ಶರ್ಮ ಉಪ್ಪಂಗಳ. ಇವರು ಮಂಗಳೂರಿನಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಬ್ಬ ತಂದೆಯಾಗಿ ಮಗಳ ಪಾಕ ಪ್ರಾವೀಣ್ಯದಿಂದ ತನ್ನ ಹೆಸರು ಪ್ರಚಲಿತವಾಗುತ್ತಿರುವುದು ಅಭಿಮಾನದ ಹಾಗೂ ಹೆಮ್ಮೆಯ ವಿಷಯ ಎಂದು ವೇಣು ಶರ್ಮ ಅಭಿಪ್ರಾಯಿಸಿದ್ದಾರೆ.






















