ಸ್ಥಳೀಯ

ಪುತ್ತೂರು ಕಾಂಗ್ರೆಸ್ ಕಚೇರಿಗೆ ಸರಕಾರಿ ಆಸ್ಪತ್ರೆಯ ಜಾಗ?? ಕಾಂಗ್ರೆಸ್ ಕಚೇರಿಗೆ ವ್ಯಾಲ್ಯೂವೇಬಲ್ ಜಾಗ ನೀಡುವ ಭರವಸೆ ನೀಡಿದ್ದ ಶಾಸಕರು!! ಸರಕಾರಿ ಜಾಗ ಕಬಳಿಕೆ ಬೆಳಕಿಗೆ ಬಂದಿದೆ ಎಂದ ಮಾಜಿ ಶಾಸಕ!

ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆ ಪುತ್ತೂರು ಇದಕ್ಕೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದಕ್ಕೆ ಮಂಜೂರು ಮಾಡುವ ಬಗ್ಗೆ ನಡೆಯುವ ಹುನ್ನಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆ ಪುತ್ತೂರು ಇದಕ್ಕೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದಕ್ಕೆ ಮಂಜೂರು ಮಾಡುವ ಬಗ್ಗೆ ನಡೆಯುವ ಹುನ್ನಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ನಂತೆ ಸರಕಾರಿ ಜಮೀನನ್ನು ನುಂಗುವ ಕೆಲಸ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ವಿಧಾನಸೌಧದ ಜಾಗವನ್ನು ಕಬಳಿಸುವ ಕೆಲಸ ನಡೆಸಲಿದ್ದಾರೆ. ಹಾಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸುವ ಯತ್ನವನ್ನು ಬಿಜೆಪಿ ಖಂಡಿಸುತ್ತದೆ ಎಂದರು.

SRK Ladders

ಹಿಂದೊಮ್ಮೆ ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿಕೆ ನೀಡಿದ್ದರು. ಪುತ್ತೂರಿನ ಹೃದಯ ಭಾಗದ ವ್ಯಾಲ್ಯುವೇಬಲ್ ಜಾಗವನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಮಂಜೂರು ಮಾಡಲಾಗುವುದು ಎಂದಿದ್ದರು. ಇದೀಗ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸರಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸಿ, ಬಳಿಕ ಕಾಂಗ್ರೆಸ್ ಪಕ್ಷದ ಕಚೇರಿಗೆ ಸ್ಥಳಾಂತರಿಸುವ ಹುನ್ನಾರ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆ ಪುತ್ತೂರು ಇದಕ್ಕೆ ಸಂಬಂಧಿಸಿದ ಪುತ್ತೂರು ಕಸಬಾ ಗ್ರಾಮದ ಸ.ನಂ 131/14A1 ರಲ್ಲಿ 0.80 ಎಕ್ರೆ ಜಮೀನು ಸಾರ್ವಜನಿಕ ಆಸ್ಪತ್ರೆ ಇದಕ್ಕೆ ದಿನಾಂಕ 25.08.2021 ರಲ್ಲು LND (3)CR 129/20-21 ರಂತೆ ಮಂಜೂರಾಗಿತ್ತು. ಇದಲ್ಲದೆ ಇದರ ಸುತ್ತ ಮುತ್ತಲಿನ ಮತ್ತು ಈ ಜಾಗ ಸೇರಿ ಸುಮಾರು 6.00 ಎಕ್ರೆ ಜಮೀನು ಕೂಡ ಸಾರ್ವಜನಿಕ ಆಸ್ಪತ್ರೆ ಉದ್ದೇಶಕ್ಕೆ ಪಹಣಿ ರಚಿಸಿ ಮೀಸಲಾಗಿದ್ದು ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಒಳ್ಳೆಯ ಅಂಶವಾಗಿರುತ್ತದೆ. ಇತ್ತೀಚೆಗೆ ಒಂದು ಪ್ರಕಟಣೆಯನ್ನು ನೋಡಿದಾಗ ಒಂದು ಆಘಾತಕಾರಿ ವಿಷಯ ಬೆಳಕಿಗೆ ಬಂತು. ಏನೆಂದರೆ ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ಜಮೀನುಗಳ ಪೈಕಿ ಪುತ್ತೂರು ಕಸಬಾ ಗ್ರಾಮದ ಸ.ನಂ 131/1441 ರಲ್ಲಿ 0.10 ಎಕ್ರೆ ಜಮೀನನ್ನು ಕಂದಾಯ ಇಲಾಖೆಯು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದಕ್ಕೆ ಮಂಜೂರು ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿ ಕಂದಾಯ ಇಲಾಖೆಯು ಇದನ್ನು ತರಾತುರಿಯಲ್ಲಿ ಮಂಜೂರು ಮಾಡುವ ಹಂತದವರೆಗೆ ಕಾರ್ಯ ಪ್ರವೃತಿಯಾದಂತೆ ಕಾಣುತ್ತಿದೆ ಎಂದರು.

ದಿನಾಂಕ 16.07.2024ಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸದ್ರಿ ಟ್ರಸ್ಟ್ ಗೆ ಜಮೀನು ನೀಡುವ ಬಗ್ಗೆ ಕ್ರಮ ವಹಿಸಲು ಕಂದಾಯ ಇಲಾಖೆ ಹಾಗೂ ಡಿಸಿಗೆ ಆದೇಶಿಸಿದ್ದಾರೆ ಇದಾದ 4 ತಿಂಗಳ ಒಳಗಾಗಿ ಸದ್ರಿ ಜಮೀನಿನ ಮಂಜೂರಾತಿ ಮಾಡಲು ಜರೂರು ತುರ್ತಾಗಿ ಮುಂದಾಗಿದದ್ದು ನೋಡಿದರೆ ಇದರ ಹಿಂದೆ ಯಾವುದೋ ಪ್ರಭಲವಾದ ಶಕ್ತಿ ಇದ್ದಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಒಂದು ಸಾರ್ವಜನಿಕ ಸರಕಾರಿ ಆಸ್ಪತ್ರೆ ಉದ್ದೇಶಕ್ಕೆ ಮೀಸಲಾದ ಜಮೀನನ್ನು ಪುತ್ತೂರು ತಾಲೂಕಿನಲ್ಲಿಯೇ ಪರಿಚಯ ಇಲ್ಲದ ಒಂದು ಖಾಸಗಿ ಟ್ರಸ್ಟ್ ಗೆ ಮೀಸಲು ಮಾಡುವ ವಿಚಾರ ಬಹಳ ಖೇದಕರ ಮತ್ತು ಇದಕ್ಕೆ ಮುಖ್ಯಮಂತ್ರಿಗಳು ಶಿಫಾರಸ್ಸು ನೀಡಿರುವುದು ಇದು ಸರಕಾರಿ ಜಮೀನುಗಳ ಮಾರಾಟಮಾಡುವ ಒಂದು ಹುನ್ನಾರ ಎಂದು ಕಾಣುತ್ತಿದೆ ಎಂದರು.

ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಯಾರದ್ದು? ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಇದರ ಪದಾಧಿಕಾರಿಗಳು ಯಾರು ? ಅದರ ಕಾರ್ಯವ್ಯಾಪ್ತಿ ಏನು ? ಅದು ಪುತ್ತೂರು ತಾಲೂಕಿನಲ್ಲಿ ನಡೆಸಿದ ಜನಪರ ಕಾರ್ಯಗಳು ಏನು ? ಸದರಿ ಟ್ರಸ್ಟ್ ಇದರ ಉದ್ದೇಶ ಏನು ? ಸದರಿ ಟ್ರಸ್ಟ್ ಇದಕ್ಕೆ ಸಾರ್ವಜನಿಕ ಆಸ್ಪತ್ರೆ ಇದಕ್ಕೆ ಮೀಸಲಾದ ಜಮೀನನ್ನು ನೀಡಬೇಕಾದ ಅಗತ್ಯತೆ ಏನು ? ಸರಕಾರಿ ಇಲಾಖೆಗಳಿಗೆ ಸ್ವಂತ ಸೂರು ಇಲ್ಲದ ಸಮಯದಲ್ಲಿ ಖಾಸಗಿ ಟ್ರಸ್ಟ್ ಗೆ ಸಾರ್ವಜನಿಕ ಆಸ್ಪತ್ರೆಯ ಜಮೀನನ್ನು ರದ್ದು ಪಡಿಸಿ ನೀಡುವ ಅಗತ್ಯತೆ ಏನಿದೆ.? ಈ ಮೊದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಹಲವಾರು ಖಾಸಗಿ ಟ್ರಸ್ಟ್ ಗಳು, ಇಲಾಖೆಗಳು, ಸಮುದಾಯದ ಅರ್ಜಿಗಳನ್ನು ಕಂದಾಯ ಇಲಾಖೆಯು ಇಷ್ಟು ತ್ವರಿತವಾಗಿ ಯಾಕೆ ವಿಲೇಮಾಡಲು ಬಯಸಲಿಲ್ಲ? ಈ ಹಿಂದೆಯೇ ಅರ್ಜಿ ನೀಡಿದ ಸಂಸ್ಥೆಗಳ, ಸಮುದಾಯಗಳ ಇಲಾಖೆಗಳ ಅರ್ಜಿಗಳನ್ನು ಬದಿಗಿರಿಸಿ ಈ ಖಾಸಗಿ ಟ್ರಸ್ಟ್ ಇದಕ್ಕೆ ಯಾಕೆ ಜಮೀನು ನೀಡಲು ಕಂದಾಯ ಇಲಾಖೆ ಮುಂದಾಗಿದೆ? ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಭವಿಷ್ಯದಲ್ಲಿ ತುರ್ತು ಮತ್ತು ವಿಶೇಷ ಚಿಕಿತ್ಸಾ ಘಟಕಗಳಿಗೆ ಅನಿವಾರ್ಯವಾಗಿ ಈಗ ಕಾಯ್ದಿರಿಸಿರುವ ಜಮೀನು ಅಗತ್ಯ ಇದೆ. ಅಲ್ಲದೆ ಈಗ ಇರುವ ಆಸ್ಪತ್ರೆಯ ಜಮೀನಿಗೆ ಸಂಬಂಧಿಸಿ ಇರುವಂತೆ ಇತರೆ ಹೆಚ್ಚುವರಿ ಜಮೀನುಗಳು ಸರಕಾರಿ ಆಸ್ಪತ್ರೆ ಬಳಿ ಇರುವುದಿಲ್ಲ ಒಂದೇ ಕಡೆ ಹೆಚ್ಚಿನ ಚಿಕಿತ್ಸೆ ಲಭ್ಯವಾಗಿ ಪುತ್ತೂರಿನಿಂದ ಮಂಗಳೂರಿಗೆ ಓಡುವುದನ್ನು ತಪ್ಪಿಸಲು ಇಲ್ಲಿಗೆ ಅನೇಕ ಚಿಕಿತ್ಸಾ ವ್ಯವಸ್ಥೆಯನ್ನು ಮಂಜೂರು ಮಾಡಿಸಲು , ವಿಶೇಷ ಸೌಲಭ್ಯವನ್ನು ಒದಗಿಸಲು ಈ ಕಾಯ್ದಿರಿಸಿದ ಜಾಗ ಬಹಳ ಅಗತ್ಯ ಆಗಿರುತ್ತದೆ. ಈಗಿನ ಸರಕಾರಿ ಆಸ್ಪತ್ರೆಗೆ ಹೆಬ್ಬಾಗಿಲಿನಂತಿರುವ ಜಮೀನನ್ನು ಖಾಸಗಿ ಟ್ರಸ್ಟ್ ಗೆ ನೀಡುವುದು ಬಹಳ ತಪ್ಪು ಇದನ್ನು ಖಂಡಿಸುತ್ತೇವೆ ಎಂದರು.

ತಹಶಿಲ್ದಾರರು ಕೋರಿರುವಂತೆ ಸಾರ್ವಜನಿಕ ಆಸ್ಪತ್ರೆ ವಿಷಯಕ್ಕೆ ಮೀಸಲಾದ ಜಮೀನನ್ನು ವಿರಹಿತ ಪಡಿಸಲು ಕೋರಿರುವ ನಿರಾಪೇಕ್ಷಣ ಪತ್ರಕ್ಕೆ ತಾಲೂಕು ವೈದ್ಯಾಧಿಕಾರಿಗಳು ಹಿಂಬರಹ ನೀಡಬಾರದು ಮತ್ತು ಇದನ್ನು ವಿರೋಧಿಸಬೇಕು ಎಂದರು.

ಈ ರೀತಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಉದ್ದೇಶಕ್ಕೆ ಮೀಸಲಾದ ಜಮೀನನ್ನು ಖಾಸಗಿ ಟ್ರಸ್ಟ್ ಗೆ ನೀಡುವುದು ಜನ ವಿರೋಧಿ ನೀತಿಯಾಗಿದೆ. ಇದು ಇಲ್ಲಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಯನ್ನು ಇಲ್ಲಿಂದ ಸ್ಥಳಾಂತರಗೊಳಿಸುವ ಹುನ್ನಾರ ಇದಾಗಿದೆ ಎಂದರು.

ಮೆಡಿಕಲ್ ಕಾಲೇಜಿನ ಕನಸು ಕಾಣುವ ಪುತ್ತೂರು ಜನತೆಗೆ ಇದು ಬಹಳ ದುಃಖದ ವಿಚಾರ ಇಂತಹ ಸರಕಾರ / ಜನಪ್ರತಿನಿಧಿ/ ಕಂದಾಯ ಇಲಾಖೆಯ ಕಾರ್ಯದಿಂದ ಸಾರ್ವಜನಿಕರ ಹಿತಾಸಕ್ತಿಗೆ ತೊಂದರೆಯಾಗುತ್ತಿದೆ. ಸರಕಾರಿ ಆಸ್ಪತ್ರೆಯ ಜಮೀನನ್ನೇ ಮಾರಾಟಮಾಡುವ ಉದ್ದೇಶ ಹೊಂದಿರುವವರಿಂದ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಕನಸಿನ ಮಾತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷ ಪಿ.ಬಿ. ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ನಗರಸಭೆ ಅಧ್ಯಕ್ಷೆ  , ಸ್ಥಾಯಿ ಸಮಿತಿ ಅಧ್ಯಕ್ಚ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2