ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡನೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ. ಆನೆ ನರಳಾಡುತ್ತಾ ಪ್ರಾಣ ಬಿಟ್ಟ ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾನವ- ವನ್ಯಮೃಗ ಸಂಘರ್ಷದಿಂದ ಈಗಾಗಲೇ ಸಾಕಷ್ಟು ಕಾಡು ಪ್ರಾಣಿಗಳು ಬಲಿಯಾಗಿದ್ದು, ಈ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದೀಗ ಅಂತಹದೇ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಈ ಘಟನೆ ಅಸ್ಸಾಂ ರಾಜ್ಯದಲ್ಲಿ ನಡೆದಿದ್ದು, ಇಲ್ಲಿನ ಮೊರಿಗಾಂವ್‌ನಲ್ಲಿರುವ ಜಾಗಿರೋಡ್ ರೈಲು ನಿಲ್ದಾಣದ ಬಳಿ ವೇಗವಾಗಿ ಬರುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಕಾಡಾನೆ ಡಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದೆ.
ತನ್ನ ಹಿಂಡಿನಿಂದ ಬೆರ್ಪಟ್ಟ ಗಂಡಾನೆ ರೈಲ್ವೆ ಹಳಿ ದಾಟುತಿತ್ತು. ಹೀಗೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಅಲ್ಲೇ ಕುಸಿದು ಬಿದ್ದ ಆನೆ, ಗಂಭೀರವಾಗಿ ಗಾಯಗೊಂಡ ಕಾರಣ ಹಳಿಯ ಮೇಲಿಂದ ಎದ್ದೇಳಲು ಹರಸಾಹಸ ಪಟ್ಟು ಕೊನೆಗೆ ಅಲ್ಲಿಯೇ ನರಳಿ ನರಳಿ ಪ್ರಾಣ ಬಿಟ್ಟಿದೆ.