ರಾಜ್ಯ ವಾರ್ತೆಸ್ಥಳೀಯ

ಕಾಂಗ್ರೆಸ್‌ ಸೇರಲ್ಲ ಎಂದ ಡಿ.ವಿ ಸದಾನಂದ ಗೌಡ: ಮುಂದೇನು?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್‌ ವಂಚಿತರಾಗಿರುವ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಅವರು ತಾನು ಕಾಂಗ್ರೆಸ್‌ ಸೇರುವುದಿಲ್ಲ ಎಂದು ಘೋಷಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಪತ್ರಿಕಾಗೋಷ್ಠಿ ಮಾಡುವುದಾಗಿ ಹೇಳುತ್ತಿದ್ದ ಅವರು ಗುರುವಾರ ಮಾಧ್ಯಮಗಳ ಮುಂದೆ ಬಂದು ಕಾಂಗ್ರೆಸ್‌ ಸೇರುವುದಿಲ್ಲ ಎಂದು ಘೋಷಿಸಿದರು. ಅದರ ಜತೆಗೆ ಹಾಲಿ ಬಿಜೆಪಿ ನಾಯಕತ್ವದ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಅವರು, ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಶುದ್ಧೀಕರಣ ಅಭಿಯಾನ ಶುರು ಮಾಡುವುದಾಗಿ ಪ್ರಕಟಿಸಿದರು.

ಬೆಂಗಳೂರು ಉತ್ತರದಲ್ಲಿ ತಮ್ಮ ಬದಲಿಗೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಿದ್ದರಿಂದ ಡಿ.ವಿ. ಸದಾನಂದ ಗೌಡರು ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಅದರ ನಡುವೆ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್‌ ನಾಯಕರು ಅವರನ್ನು ಸಂಪರ್ಕ ಮಾಡಿದ್ದರು. ಈ ಹಂತದಲ್ಲಿ ತನಗೆ ಕಾಂಗ್ರೆಸ್‌ ಆಫರ್‌ ಇದೆ ಎಂದು ಘಂಟಾಘೋಷವಾಗಿ ಹೇಳಿಕೊಂಡ ಡಿ.ವಿ ಸದಾನಂದ ಗೌಡರು ಮಾರ್ಚ್‌ 18ರ ಮಂಗಳವಾರ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದರು. ಬಳಿಕ ಒಕ್ಕಲಿಗ ಸಂಘದ ಸಭೆ, ತವರಿನ ಭೇಟಿಯ ನೆಪ ಹೇಳಿ ಮುಂದೂಡಿದ ಮಾಧ್ಯಮ ಗೋಷ್ಠಿಯನ್ನು ಗುರುವಾರ ಆಯೋಜಿಸಿದ್ದರು.

SRK Ladders

ಇದರಲ್ಲಿ ತನ್ನ ಮುಂದಿನ ನಡೆಗಳನ್ನು ವಿವರಿಸಿದ ಡಿ.ವಿ. ಸದಾನಂದ ಗೌಡ ಅವರು, ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದ ತಮ್ಮನ್ನು ಮರಳಿ ಸ್ಪರ್ಧೆಗೆ ಎಳೆದು ಅಪಮಾನ ಮಾಡಿದ್ದರಿಂದ ಬೇಸರವಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು. ರಾಜ್ಯ ಬಿಜೆಪಿ ಸ್ವಜನ ಪಕ್ಷಪಾತ, ಕೌಟುಂಬಿಕ ರಾಜಕಾರಣ ಮತ್ತು ಚೇಲಾಗಳ ರಾಜಕಾರಣದಿಂದ ತುಂಬಿ ತುಳುಕುತ್ತಿದೆ. ಇದನ್ನು ಶುದ್ಧೀಕರಣ ಮಾಡುವ ಕಾರ್ಯದ ಮುಂಚೂಣಿಯಲ್ಲಿ ನಿಲ್ಲುತ್ತೇನೆ. ಲೋಕಸಭಾ ಚುನಾವಣೆಯ ಬಳಿಕ ಈ ಕಾರ್ಯ ಆರಂಭವಾಗಲಿದೆ ಎಂದು ಘೋಷಿಸಿದರು.

ಡಿ.ವಿ.ಸದಾನಂದ ಗೌಡ ಅವರಿಗೆ ಬಿಜೆಪಿ ಏನೆಲ್ಲ ಕೊಟ್ಟಿದೆ. ಆದರೆ, ಈಗಲೂ ಅವರಿಗೆ ರಾಜಕಾರಣದ ಆಸೆ ನಿಂತಿಲ್ಲ ಎಂದೆಲ್ಲ ಮಾಧ್ಯಮದಲ್ಲಿ ವಿಶ್ಲೇಷಣೆ ನಡೆಯಿತು. ಟಿಕೆಟ್ ತಪ್ಪಿದ್ದಕ್ಕೆ ಸದಾನಂದಗೌಡರಿಗೆ ಬೇಸರ ಆಯ್ತು ಅಂತ ಸುದ್ದಿ ಆಯ್ತು. ಹೌದು ಟಿಕೆಟ್ ತಪ್ಪಿದ್ದಕ್ಕೆ ಬೇಸರ ಆಗಿದ್ದು ನಿಜ.‌ ನನಗೆ ಬಿಜೆಪಿಯಿಂದ ಟಿಕೆಟ್‌ ತಪ್ಪಿದಾಗ ಕಾಂಗ್ರೆಸ್‌ನಿಂದ ಆಫರ್‌ ಬಂದಿದ್ದೂ ನಿಜ. ಹಾಗಿದ್ದರೆ ನಾನು ಕಾಂಗ್ರೆಸ್‌ ಸೇರುತ್ತೇನಾ ಎನ್ನುವ ಪ್ರಶ್ನೆ ಇದೆ. ಅದಕ್ಕೆ ಸ್ಪಷ್ಟ ಉತ್ತರ: ನಾನು ಕಾಂಗ್ರೆಸ್‌ ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನನ್ನನ್ನು ಆರತಿ ಎತ್ತಿ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದವರು ಕೊನೆಗೆ ಟಿಕೆಟ್‌ ನೀಡದೆ ಮಂಗಳಾರತಿ ಎತ್ತಿದರು. ಯಾರು ನನ್ನನ್ನು ಅಪಮಾನ ಮಾಡಿದರೋ ಅವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ. ಕೆಲವು ನನಗೆ ನೋವು ಕೊಟ್ಟಿರಬಹುದು. ಆದರೆ, ನಾನು ಒಂದು ಮಾತು ಹೇಳುತ್ತೇನೆ. ಯಾರೇ ಬೇಸರ ಮಾಡಿದರೂ ನಮಗೆ ಅದನ್ನು ಸಹಿಸಿಕೊಳ್ಳಲು ತಾಳ್ಮೆ ಇದ್ದರೆ ದುಃಖ ನೀಡಿದವರು ಇದ್ದೂ ಸತ್ತಂತೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4