ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ರಂಗದಲ್ಲೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ಇದೀಗ ಕಾರ್ಮಿಕ ಇಲಾಖಾ ವತಿಯಿಂದ ಕಟ್ಟಡ ಮತ್ತು ಇತರೆ ಕಾರ್ಮಿಕರಿಗಾಗಿ ಮೊಬೈಲ್ ಕ್ಲಿನಿಕ್ ಸಂಚಾರಿ ಆರೋಗ್ಯ ಘಟಕವನ್ನು ಸರಕಾರ ಪ್ರಾರಂಭ ಮಾಡಿರುವುದು ಉತ್ತಮ ವಿಚಾರ ಇದರಿಂದ ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಆರೋಗ್ಯ ಸೇವೆ ಲಭಿಸಿದಂತಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಪುತ್ತೂರು ತಾಲೂಕಿನಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗಾಗಿ ಸರಕಾರದ ವತಿಯಿಂದ ಪ್ರಾರಂಭಗೊಂಡ ಸಂಚಾರಿ ಆರೋಗ್ಯ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಕಟ್ಟಡಕಡೇಯ ವ್ಯಕ್ತಿಗಳಿಗೆ ಆರೋಗ್ಯ ಸೇವೆಯನ್ನು ಒದಗಿಸಲು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ. ಈ ಸಂಚಾರಿ ಆರೋಗ್ಯ ಘಟಕದಲ್ಲಿ ಕಾರ್ಮಿಕರ ಕಾರ್ಡು ಮಾಡಿಸಿಕೊಂಡವರು ಮತ್ತು ಅವರ ಕುಟುಂಬಸ್ಥರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅನಾರೋಗ್ಯ ಕಂಡು ಬಂದಲ್ಲಿ ಅವರನ್ನು ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ. ಈ ಘಟಕದಲ್ಲಿ ಬಿ ಪಿ, ಸಕ್ಕರೆ ಕಾಯಿಲೆ, ಲಿವರ್ , ಕಿಡ್ನಿ ಟೆಸ್ಟ್ ಸೇರಿದಂತೆ ಇತರೆ ರೋಗಗಳ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ವಾಹನದಲ್ಲೇ ಲ್ಯಾಬ್ ಮತ್ತು ಇಬ್ಬರು ವೈದ್ಯರು ಇರುತ್ತಾರೆ. ವಾಹನದಲ್ಲೇ ಔಷಧಿಯನ್ನು ಕೂಡ ವಿತರಣೆ ಮಾಡಲಾಗುತ್ತದೆ. ಸರಕಾರದ ಆರೋಗ್ಯ ಸೇವೆ ಬಡ ಕುಟುಂಬಗಳ ಮನೆ ಬಾಗಿಲಿಗೆ ತಲುಪಿಸಿದ್ದು ರಾಜ್ಯ ಸರಕಾರದ ಮಹತ್ತರವಾದ ಸಾಧನೆಯಾಗಿದೆ ಎಂದು ಹೇಳಿದರು.
ಗ್ರಾಮಗಳಿಗೆ ತೆರಳಿ ಚಿಕಿತ್ಸೆ ಸಂಚಾರಿ ಆರೋಗ್ಯ ಘಟಕ ತಾಲೂಕಿನ ಪ್ರತೀ ಗ್ರಾಮಗಳಿಗೂ ಸಂಚರಿಸುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ವಾಹನವನ್ನು ನಿಲ್ಲಿಸಲಾಗುತ್ತದೆ. ಆ ಗ್ರಾಮಗಳ ಕಾರ್ಮಿಕರು ಸಂಚಾರಿ ಘಟಕಕ್ಕೆ ಬಂದು ತಮ್ಮ ಕಾರ್ಮಿಕರ ಕಾರ್ಡು ತೋರಿಸಿ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಬಹುದಾಗಿದೆ. ದ ಕ ಜಿಲ್ಲೆಗೆ ಮೂರು ಸಂಚಾರಿ ವಾಹನಗಳಿದ್ದು ಪುತ್ತೂರು, ಸುಳ್ಯ, ಕಡಬ ಮತ್ತು ಬೆಳ್ತಂಗಡಿಗೆ ಈ ವಾಹನ ಓಡಾಡಲಿದೆ. ಪ್ರತೀ ದಿನವೂ ಈ ಸಂಚಾರಿ ವಾಹನ ಗ್ರಾಮಗಳಿಗೆ ಭೇಟಿ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಪಾ, ಪುತ್ತೂರಿನ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ, ಸೇರಿದಂತೆ ಸಂಚಾರಿ ಘಟಕದ ಸಿಬಂದಿಗಳು ಉಪಸ್ಥಿತರಿದ್ದರು.