ಬೆಂಗಳೂರು: ಬೀದಿ ನಾಯಿ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ರಾಜ್ಯದಲ್ಲೂ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ವಿಧಾನಮಂಡಲದ ಉಭಯ ಸದನಗಳಲ್ಲಿ ಕೇಳಿ ಬಂದಿದೆ.
ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು, ವಿಧಾನಸೌಧ ಹಾಗೂ ಶಾಸಕರ ಭವನದ ವ್ಯಾಪ್ತಿಯಲ್ಲಿ ಬೀದಿನಾಯಿ ನಿಯಂತ್ರಣ ಬೇಕೋ, ಬೇಡವೋ? ಎಂದು ಪ್ರಶ್ನಿಸಿದ್ದು ಚರ್ಚೆಗೆ ಕಾರಣವಾಯಿತು.
ಪ್ರಶೋತ್ತರ ಕಲಾಪ ಮುಕ್ತಾಯವಾಗುತ್ತಿದ್ದಂತೆ ಶಾಸಕರಾದ ಸುರೇಶ್ ಕುಮಾರ್, ಅಶ್ವತ್ಥನಾರಾಯಣ ಹಾಗೂ ಜೆಡಿಎಸ್‌ನ ಸುರೇಶ ಬಾಬು ಈ ವಿಚಾರವನ್ನು ಪ್ರಸ್ತಾವಿಸಿದರು. ರಾಜ್ಯದಲ್ಲಿ 2 ಲಕ್ಷ ಬೀದಿ ನಾಯಿ ಕಡಿತ ಪ್ರಕರಣವಾಗಿದೆ. ಯಾರ್ಯಾರು ಶ್ವಾನಪ್ರಿಯರಿದ್ದಾರೋ ಅವರ ಮನೆಗೆ ತೆಗೆದುಕೊಂಡು ಹೋಗಿ ಬಿಟ್ಟು ಬರಲಿ ಎಂದು ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.
ಶಾಸಕರ ಭವನದಲ್ಲೂ ನಾಯಿಗಳ ‘ಮಲ’ ಕಾಟ:
ಕೆಲವು ಶಾಸಕರು ವಿಧಾನಸೌಧ, ಶಾಸಕರ ಭವನದಲ್ಲೂ ನಾಯಿಗಳಿವೆ ಎಂದಾಗ ಸ್ಪೀಕರ್ ಯು.ಟಿ. ಖಾದರ್ ಅವರು, ಕೆಲವರು ಶ್ವಾನ ನಿಯಂತ್ರಣ ಮಾಡಿ ಎಂದರೆ ಕೆಲವರು ಬೇಡ ಎನ್ನುತ್ತಾರೆ. ನಿಮಗೆ ಬೇಕೋ, ಬೇಡವೋ? ಎಂದು ಪ್ರಶ್ನಿಸಿದರು. ಉಮಾನಾಥ ಕೋಟ್ಯಾನ್ ಮಾತನಾಡಿ, ಶಾಸಕರ ಭವನದ ಕೋಣೆಗಳ ಎದುರು ನಾಯಿಗಳು ಮಲವಿಸರ್ಜನೆ ಮಾಡುತ್ತವೆ. ಶಾಸಕರ ಭವನ ನಿಮ್ಮ ವ್ಯಾಪ್ತಿಗೆ ಬರುವುದರಿಂದ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಬೆಂಗಳೂರಲ್ಲಿ ನಾಯಿಗಳ ಆಶ್ರಯ ಕೇಂದ್ರ ಸ್ಥಾಪಿಸಿ:
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಈ ಸಂಬಂಧ ನಾಯಿಗಳ ಶೆಲ್ಟರ್ ಸ್ಥಾಪನೆಗೆ ಮುಂದಾಗಬೇಕು ಎಂದು ಬಿಜೆಪಿ ಸದಸ್ಯ ರವಿಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಸರಕಾರವನ್ನು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಹೋಗಿದೆ. ಸುಮಾರು 2.3 ಲಕ್ಷ ಬೀದಿನಾಯಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಇವೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯ ಪಟ್ಟುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ವೃದ್ಧರ ಮೇಲೆ ಪುಟಾಣಿ ಮಕ್ಕಳ ಮೇಲೆ ದಾಳಿ ನಡೆಸಿವೆ. ಈ ಸಂಬಂಧ ಸರಕಾರ ಎಚ್ಚರಿಕೆ ವಹಿಸಬೇಕು. ಕೂಡಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ನಾಯಿ ಶೆಲ್ಟರ್ ರಚನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
9 ಮಂದಿ ಮೃತಪಟ್ಟಿದ್ದಾರೆ
ಕಳೆದ ಕೆಲವು ತಿಂಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋಡಿಗೆಹಳ್ಳಿಯಲ್ಲಿ ಸೀತಪ್ಪ ಎಂಬ ವ್ಯಕ್ತಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಸೀತಪ್ಪ ಮೃತಪಟ್ಟಿದ್ದಾರೆ. ಜ್ಞಾನಭಾರತಿ ವ್ಯಾಪ್ತಿಯಲ್ಲಿ ಕೂಡ ಬೀದಿನಾಯಿ ದಾಳಿಯಿಂದ ಸೌಜನ್ಯಾ ಎಂಬವರು ಮೃತಪಟ್ಟಿದ್ದಾರೆ. 2025ರಲ್ಲಿ ಈವರೆಗೂ ರಾಜ್ಯ ವ್ಯಾಪಿ 19 ಮಂದಿ ರೇಬಿಸ್ ರೋಗದಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿಯೇ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆದರೆ ರವಿಕುಮಾರ್ ಪ್ರಶ್ನೆಗೆ ಉತ್ತರಿಸಲು ಸದನದಲ್ಲಿ ಸಂಬಂಧಪಟ್ಟ ಸಚಿವರು ಇರಲಿಲ್ಲ. ಹೀಗಾಗಿ ಸಭಾನಾಯಕ ಭೋಸರಾಜ್ ಅವರು ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು.






















