ವಿಶೇಷ

ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಧರ್ಮಸ್ಥಳ!! ಕಾಣೆಯಾದ ಸತೀಶ್ 26 ವರ್ಷಗಳ ಬಳಿಕ ಸಲೀಂ ಆಗಿ ತಾಯಿ ಮಡಿಲಿಗೆ!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ಧರ್ಮಸ್ಥಳ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಧರ್ಮಸ್ಥಳದಲ್ಲಿಯೇ 26 ವರ್ಷದ ಹಿಂದೆ ಕಾಣೆಯಾದ ಹುಡಗ, ಇದೀಗ ಮತ್ತೆ ಧರ್ಮಸ್ಥಳಕ್ಕೆ ಬಂದು ತಾಯಿ ಮಡಿಲು ಸೇರಿದ್ದಾನೆ. 26 ವರ್ಷಗಳ ಬಳಿಕ ತಾಯಿ-ಮಗ ಒಂದಾದ ಅಪರೂಪದ ಘಟನೆ ನಡೆದದ್ದು ಧರ್ಮಸ್ಥಳ ಗ್ರಾಮದ ಅಶೋಕನಗರದಲ್ಲಿ.

maithri

ಧರ್ಮಸ್ಥಳ ಗ್ರಾಮದ ಅಶೋಕನಗರದ ಕುಂಞ ಮತ್ತು ಅಕ್ಕು ದಂಪತಿಯ ಪ್ರಥಮ ಪುತ್ರ ಈ ಸತೀಶ್, 12 ವರುಷದ ಬಾಲಕನಿದ್ದಾಗ, ಅಂದರೆ 2000ನೇ ಇಸವಿಯಲ್ಲಿ ಧರ್ಮಸ್ಥಳ ಲಕ್ಷ ದೀಪದ ಸಂದರ್ಭ ಸರ್ಕಸ್ ಕಂಪನಿಯೊಂದಿಗೆ ಕೆಲಸಕ್ಕೆಂದು ಹೋದಾತ ಮರಳಿ ಊರಿಗೆ ಬರಲಿಲ್ಲ. ಮನೆ ಸೇರಲಿಲ್ಲ..

saleem

ಮನೆಯವರು ಈ ಬಗ್ಗೆ ಸಾಕಷ್ಟು ವಿಚಾರಿಸಿದರೂ ಪ್ರಯೋಜನ ಆಗಲಿಲ್ಲ. ಮಗ ಮನೆಗೆ ಬಾರದ ಚಿಂತೆಯಲ್ಲಿ ತಾಯಿ ಅಕ್ಕು ಮಗನ ನೆನಪಿನಲ್ಲೇ ದಿನ ಕಳೆದರು. ದೈವ ದೇವರಿಗೆ ಹರಕೆ ಹೊತ್ತು ಮಗನಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತರು. ಆದರೆ ಮಗ ಬಂದಿರಲೇ ಇಲ್ಲ. ಪ್ರಶ್ನಾಚಿಂತನೆಯಲ್ಲಿ ಕೇಳಿದಾಗ ಮಗ ಮನೆಗೆ ಬರುತ್ತಾನೆ ಎಂದು ಕಂಡು ಬರುತ್ತಿತ್ತು. ಹೀಗಾಗಿ ಹೆತ್ತ ತಾಯಿ ವಿಶ್ವಾಸ ಕಳೆದುಕೊಳ್ಳದೇ ಮಗನಿಗಾಗಿ ಎದುರು ನೋಡುತ್ತಿದ್ದರು.

ಸರ್ಕಸ್ ಕಂಪನಿ ಜೊತೆ ಸೇರಿ ಊರು ಬಿಟ್ಟ ಸತೀಶ, ಮಹಾರಾಷ್ಟ್ರದಲ್ಲಿ ಮದುವೆ ಹಾಲ್, ಡೆಕೋರೇಶನ್, ಚಾಲಕ, ಹೋಟೆಲ್‌ಗಳಲ್ಲಿ ಹೀಗೆ ಬೇರೆ ಬೇರೆ ಕೆಲಸ ಮಾಡಿ ಬದುಕು ಕಟ್ಟಿಕೊಂಡ ಸತೀಶ, ಸಲೀಂ ಅಬ್ದುಲ್ ಅನ್ಸಾರಿಯಾಗಿ ಬದಲಾಗಿ ಹೊಸ ಜೀವನ ಆರಂಭಿಸಿದ. ತಾಲೀಮಾ ಎಂಬ ಯುವತಿಯೊಂದಿಗೆ ವಿವಾಹವಾಗಿ ಮಹಾರಾಷ್ಟ್ರದಲ್ಲಿ ಬಾಡಿಗೆ ಮನೆಯಲ್ಲಿ ಪುತ್ರಿ ಖುಷಿ (14) ಹಾಗೂ ಪುತ್ರ ಅಝಂ (9) ಜೊತೆಗೆ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದ.

ಮಹಾರಾಷ್ಟ್ರದಲ್ಲಿ ಸತೀಶ, ಸಲೀಂ ಅಬ್ದುಲ್ ಅನ್ಸಾರಿಯಾಗಿ ಬದುಕು ಕಟ್ಟಿಕೊಂಡಿದ್ದರೂ, ಮನಸ್ಸಿನಲ್ಲಿ ತನ್ನ ಮನೆಯ ತುಡಿತ ಇತ್ತು. ಮನೆ ಸೇರಬೇಕು ಎಂಬ ಆಸೆಯೊಂದಿತ್ತು. ಆದರೆ ಮನೆ ಹಾಗೂ ಊರಿನ ಬಗ್ಗೆ ಮನಸ್ಸಿನಲ್ಲಿ  ಅಸ್ಪಷ್ಟ ಚಿತ್ರವಿತ್ತು. ಹೀಗಾಗಿ 1500 ಕಿಲೋ ಮೀಟರ್ ದೂರದ ಧರ್ಮಸ್ಥಳಕ್ಕೆ ಗೆಳೆಯರೊಂದಿಗೆ ಬಂದು ದೇವರ ದರ್ಶನ ಪಡೆದು ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಡೆದಾಡುವಾಗ ಒಂದೊಂದೇ ಹಳೆ ನೆನಪುಗಳು ಮರುಕಳಿಸುತ್ತಿತ್ತು.

ಹಳೆಯ ನೆನಪನ್ನು ಮನನ ಮಾಡುತ್ತಾ, ಹೆತ್ತ ತಾಯಿಯನ್ನು ಹುಡುಕಿಕೊಂಡು ಧರ್ಮಸ್ಥಳದ ಅಂಗಡಿಯೊಂದಕ್ಕೆ ಬಂದು ಅಂಗಡಿಯವರಲ್ಲಿ ತಾನು ಇದೇ ಊರಿನವನು, 26 ವರ್ಷದ ಹಿಂದೆ ಊರು ಬಿಟ್ಟು ಹೋಗಿದ್ದೆ ಎಂದ ಆತ, ತನ್ನ ತಂದೆ-ತಾಯಿ, ತಮ್ಮಂದಿರ ಹೆಸರು ಹೇಳಿದ. ಈ ವಿಚಾರ ಕೇಳಿದ ಅಂಗಡಿಯವರಿಗೂ ಅಚ್ಚರಿ. ಬಳಿಕ ಆತನ ಮನೆಯವರಿಗೆ ವಿಚಾರ ತಲುಪಿಸುತ್ತಾರೆ ಅಂಗಡಿಯ ಮಾಲಕ ಯತೀಶ್.

ಇದಾದ ಕೆಲವೇ ಹೊತ್ತಿನಲ್ಲಿ ನೂರಾರು ಮಂದಿ ಊರಿನವರು ಸೇರುತ್ತಾರೆ. ಹಳೆಯ ನೆನಪುಗಳನ್ನು ಮಾತನಾಡಿಕೊಳ್ಳುತ್ತಾರೆ. 26 ವರ್ಷಗಳ ಬಳಿಕ ಬಂದ ಮಗನನ್ನು ತಾಯಿ ಬಿಗಿದಪ್ಪಿ ಆನಂದ ಬಾಷ್ಪ ಸುರಿಸುತ್ತಾರೆ. ತಮ್ಮ ನಾಗೇಶ್ ಗೂ ಅಣ್ಣನನ್ನು ನೋಡಿ ಖುಷಿಗೆ ಪಾರವೇ ಇರಲಿಲ್ಲ.

ಖುಷಿ ಖುಷಿಯಾಗಿ ಮಗನನ್ನು ಮನೆ ಮನದಲ್ಲಿ ತುಂಬಿಸಿಕೊಳ್ಳುತ್ತಾರೆ.  26 ವರ್ಷದ ಬಳಿಕ ಮಗ ಮನೆ ಸೇರುವಂತಾಗುತ್ತದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts