ಪುತ್ತೂರು: 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರ ಶನಿವಾರ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್ ಆಶ್ರಯದಲ್ಲಿ ಯೋಗ ಸಂಭ್ರಮ ನಡೆಯಲಿದೆ.
1980ರಿಂದ ಸರ್ವರಿಗೂ ಉಚಿತ ಶಿಕ್ಷಣವನ್ನು ನೀಡುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನೇತ್ರಾವತಿ ವಲಯದ ಪುತ್ತೂರು ತಾಲೂಕು ಮತ್ತು ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್, ಆಯುಷ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದಲ್ಲಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಧ್ಯೇಯೋದ್ಧೇಶದೊಂದಿಗೆ ಯೋಗ ಸಂಭ್ರಮ ಹಮ್ಮಿಕೊಳ್ಳಲಾಗಿದೆ.
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜೂ. 21ರಂದು ಬೆಳಗ್ಗೆ 5ರಿಂದ 7ರವರೆಗೆ ಯೋಗ ನಡೆಯಲಿದೆ.
ಬಿಸಿರೋಡ್, ಕಲ್ಲಡ್ಕ, ಉಪ್ಪಿನಂಗಡಿ, ಅಲಂಕಾರು, ಸುಬ್ರಹ್ಮಣ್ಯ, ಪಂಜ ಮತ್ತು ಪುತ್ತೂರು ತಾಲೂಕಿನ ಯೋಗಬಂಧುಗಳು, ಇತರೇ ಸಂಘಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 750ಕ್ಕೂ ಮಿಕ್ಕಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.