ಮಂಗಳೂರು: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ತೋರಿಸುವುದಾಗಿ ಕಾಂಗ್ರೆಸ್ ಮುಖಂಡ ಹಕೀಂ ಕೂರ್ನಡ್ಕ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೇಳುತ್ತೇನೆ. ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಿ ಶಾಸಕನಾಗಿ ಗೆದ್ದು ತೋರಿಸುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುತ್ತೂರಿನಲ್ಲಿ ಪುತ್ತಿಲ ಅವರಿಗೆ 55 ಸಾವಿರ ಮತಗಳು ಬಂದಿರುವುದನ್ನು ಉಲ್ಲೇಖಿಸಿದ ಹಕೀಂ ಕೂರ್ನಡ್ಕ, “ಪುತ್ತಿಲ ಅವರಿಗೆ 55 ಸಾವಿರ ಮತಗಳು ಬಂದಿವೆ. ನನಗೆ ಯಾಕೆ 55 ಸಾವಿರ ಮತಗಳು ಬರಬಾರದು? ನನಗೂ ಹಿಂದೂಗಳ ಮತಗಳು ಬರುತ್ತವೆ” ಎಂದು ಹೇಳಿದರು.
ಇತ್ತೀಚೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅವರ ಬೆಂಬಲಿಗರು ಮತ್ತು ಹಕೀಂ ಕೂರ್ನಡ್ಕ ಅವರ ನಡುವೆ ನಡೆದಿದ್ದ ಎನ್ನಲಾದ ಗಲಾಟೆಯ ಬಳಿಕ ಹಕೀಂ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಜನರ ಬೆಂಬಲದ ವಿಶ್ವಾಸದಲ್ಲಿರುವುದಾಗಿ ಹೇಳಿರುವ ಹಕೀಂ, ಕಾಂಗ್ರೆಸ್ ಟಿಕೆಟ್ ದೊರೆತರೆ ಪಕ್ಷದ ಅಭ್ಯರ್ಥಿಯಾಗಿ ಹಾಗೂ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಹಕೀಂ ಕೂರ್ನಡ್ಕ ಅವರ ಈ ಹೇಳಿಕೆ ಇದೀಗ ಪುತ್ತೂರು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
























