ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಕಾರ್ಯನಿರ್ವಾಹಕ ಆದೇಶದ ನಂತರ ಅಮೆರಿಕವು ಪಾಕಿಸ್ತಾನಕ್ಕೆ ನೀಡುವ ವಿದೇಶಿ ಸಹಾಯವನ್ನು ಮರು ಮೌಲ್ಯಮಾಪನದ ಉದ್ದೇಶದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ
ಈ ಕ್ರಮವು ಪಾಕಿಸ್ತಾನದಲ್ಲಿ ನಡೆಯುತ್ತಿರುವ `ಅಂತರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿ(ಯುಎಸ್‍ಎಐಡಿ)ಯ ಹಲವಾರು ಪ್ರಮುಖ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದರಲ್ಲಿ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಮತ್ತು ರಕ್ಷಣೆಯನ್ನು ಉತ್ತೇಜಿಸುವ ಪ್ರಮುಖ ಕಾರ್ಯಕ್ರಮವಾದ ` ಸಾಂಸ್ಕೃತಿಕ ಸಂರಕ್ಷಣೆಗಾಗಿ ರಾಯಭಾರಿಗಳ ನಿಧಿ’ ಯೋಜನೆಯೂ ಸೇರಿದೆ. ಆರ್ಥಿಕ ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದ ನಾಲ್ಕು ಯೋಜನೆಗಳು, ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಯೋಜನೆಗಳೂ ಸ್ಥಗಿತಗೊಂಡಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಜತೆಗೆ, ಆರೋಗ್ಯ, ಕೃಷಿ, ಜೀವನೋಪಾಯ ಮತ್ತು ಆಹಾರ ಭದ್ರತೆ, ನೆರೆ, ಹವಾಮಾನ, ಶಿಕ್ಷಣ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಹಾಗೂ ಆಡಳಿತ ನಿಧಿಗೆ ಸಂಬಂಧಿಸಿದ ಯೋಜನೆಗಳಿಗೂ ಸಮಸ್ಯೆಯಾಗಿದೆ ಎಂದು ವರದಿಯಾಗಿದೆ.