ಇರಾನ್ ಹಾಗೂ ಅಮೆರಿಕ, ಇಸ್ರೇಲ್ ನಡುವಿನ ಯುದ್ಧ ಇದೀಗ ಭೀಕರ ಪರಿಸರ ದುರಂತಕ್ಕೆ ಹೇತುವಾಗಿದೆ ಎನ್ನುವ ಭಯಾನಕ ಅಂಶ ಹೊರಬಿದ್ದಿದೆ.
ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದು, 1991ರ ಗಲ್ಫ್ ವಾರ್ ಗಿಂತಲೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ತಿಳಿಸಿದ್ದಾರೆ. ಗಲ್ಫ್ ವಾರ್ ನಿಂದಾಗಿ ಸೈನಿಕರು ಈಗಲೂ ಅನೇಕ ಸಮಸ್ಯೆಗಳಿಂದ ಈಗಲೂ ಬಳಲುತ್ತಿದ್ದಾರೆ. ಒಂದು ವೇಳೆ ಈಗಿನ ಯುದ್ಧ ಇನ್ನು ಮುಂದುವರಿದದ್ದೇ ಆದರೆ ಗಲ್ಫ್ ವಾರ್ ಗಿಂತಲೂ 10 ಪಟ್ಟು ಹೆಚ್ಚಿನ ಸಮಸ್ಯೆಯನ್ನು ಜನರು ಎದುರಿಸಲಿದ್ದಾರೆ ಎನ್ನುವ ಗಂಭೀರ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ತೈಲ ಬಾವಿಗಳಿಂದ ಹೊರಹೊಮ್ಮುವ ದಟ್ಟ ಕಪ್ಪು ಹೊಗೆ ನೂರಾರು ಕಿಲೋ ಮೀಟರ್ ದೂರದವರೆಗೆ ಹರಡಿ ಜನರ ಆರೋಗ್ಯಕ್ಕೆ ಮಾರಕವಾಗಲಿದೆ. ಈ ಹೊಗೆಯಲ್ಲಿರುವ ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡಯಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ ಗಳು ಶ್ವಾಸಕೋಶ ಹಾಗೂ ರಕ್ತದ ಮೇಲೆ ನೇರ ಪರಿಣಾಮ ಬೀರುತ್ತವೆ. ಗಾಳಿಯಲ್ಲಿ ಸೇರಿದ ಈ ವಿಷಯಗಳು ಮಳೆ ನೀರಿನಲ್ಲಿ ಬೆರೆತು ಆಮ್ಲ ಮಳೆಯನ್ನು ಸೃಷ್ಟಿಸಿ ಶ್ವಾಸಕೋಶಗಳನ್ನು ಹಾನಿಗೊಳಿಸುತ್ತವೆ. ಇದರಿಂದ ಚರ್ಮರೋಗ, ಕ್ಯಾನ್ಸರ್ ಹಾಗೂ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ತಕ್ಷಣವೇ ಸಾವು ಸಂಭವಿಸದೇ ಇದ್ದರೂ, ದೀರ್ಘಾವಧಿಯಲ್ಲಿ ದೇಹದ ಅಂಗಾಂಗಗಳನ್ನು ಹಾನಿಗೊಳಿಸುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
1991ರ ಗಲ್ಫ್ ವಾರ್ ಸಂದರ್ಭ ತೈಲ ಬಾವಿಗಳಿಗೆ ಬೆಂಕಿ ಹಚ್ಚಲಾಗಿತ್ತು. ನಂತರ ಗಲ್ಫ್ ವಾರ್ ಸಿಂಡ್ರೋಮ್ ಕಾಣಿಸಿಕೊಂಡಿತ್ತು. ಇದೀಗ ಇರಾನಿನ ಬೃಹತ್ ತೈಲ ಸಂಗ್ರಹಾಗಾರಗಳ ಮೇಲೆ ದಾಳಿಯಾದರೆ, ಬಹಳ ಅಪಾಯಕಾರಿಯಾಗಿರಬಹುದು. ಪರ್ಶಿಯನ್ ಗಲ್ಫ್ ದಾಟಿ ನೆರೆ ರಾಷ್ಟ್ರಗಳಿಗಷ್ಟೇ ಅಲ್ಲ ಜಾಗತಿಕ ವೈಪರೀತ್ಯಕ್ಕೆ ಕಾರಣವಾಗಬಹುದು. ಭಾರತದವರೆಗೂ ಪರಿಣಾಮ ತಟ್ಟು ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.























