ಶಿಕ್ಷಣ

ಅಂಬಿಕಾ ಸಮೂಹ ಸಂಸ್ಥೆಗಳ ರಜತ ಮಹೋತ್ಸವದ ಸಮಾರೋಪದಲ್ಲಿ ಶೃಂಗೇರಿ ಶ್ರೀ ಆಶೀರ್ವಚನ | ಆಟೋ ಚಾಲಕರು – ಪ್ರಯಾಣಿಕರಿಗಾಗಿ ಓಲಾ, ಉಬಾರ್ ಮಾದರಿಯ ನೂತನ ಆ್ಯಪ್ ಲೋಕಾರ್ಪಣೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಸಮಾರೋಪ ಸಮಾರಂಭ ಮೇ 7ರಂದು ಬಪ್ಪಳಿಗೆಯ ಅಂಬಿಕಾ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದ್ದು, ಶೃಂಗೇರಿ ಕ್ಷೇತ್ರದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಭೇಟಿ ನೀಡಲಿದ್ದಾರೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.

chennai-shopping
maithri

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರಕ್ಕೂ ಅಂಬಿಕಾ ವಿದ್ಯಾಸಂಸ್ಥೆಗಳಿಗೂ ಅವಿನಾಭಾವ ಸಂಬಂಧ. ಶೃಂಗೇರಿ ಉಭಯ ಜಗದ್ಗುರುಗಳ ಕೃಪಾಶೀರ್ವಾದ ಅಂಬಿಕಾ ಸಂಸ್ಥೆಗಳ ಬೆಳವಣಿಗೆಯ ಹಿಂದಿರುವ ಮಹಾನ್ ಶಕ್ತಿ. ಅಂಬಿಕಾ ವಿದ್ಯಾಲಯದ ನಾಮಫಲಕವನ್ನು ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು 2014ರಲ್ಲಿ ಅನಾವರಣಗೊಳಿಸಿ ಹರಸಿದ್ದರು. ತದನಂತರ 2016ರಲ್ಲಿ ತಮ್ಮ ಉತ್ತರಾಧಿಕಾರಿ ಶಿಷ್ಯರಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಜತೆಗೂಡಿ ಬಪ್ಪಳಿಗೆಗೆ ಆಗಮಿಸಿ ವಸತಿಯುತ ಅಂಬಿಕಾ ಪದವಿಪೂರ್ವ ವಿದ್ಯಾಲಯವನ್ನು ಲೋಕಾರ್ಪಣೆಗೊಳಿಸಿದ್ದರು. ಇದಲ್ಲದೆ 2021ರಲ್ಲಿ ಅಂಬಿಕಾ ವಿದ್ಯಾಲಯಕ್ಕೆ ಸಿಬಿಎಸ್‌ಇ ಮಾನ್ಯತೆ ದೊರಕಿದಾಗ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಶೃಂಗೇರಿಯಲ್ಲಿ ‘ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ’ ಎಂಬ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಪುತ್ತೂರಿನ ಮೊತ್ತಮೊದಲ ಸಿಬಿಎಸ್‌ಇ ಸಂಸ್ಥೆ ಲೋಕಾರ್ಪಣೆಗೊಂಡಿತು. ತನ್ಮಧ್ಯೆ 2019ರಲ್ಲಿ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಅಂಬಿಕಾ ಮಹಾವಿದ್ಯಾಲಯವನ್ನು ಬಪ್ಪಳಿಗೆಯಲ್ಲಿ ಲೋಕಕ್ಕೆ ಸಮರ್ಪಿಸಿದ್ದರು. 2024ರಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ತನ್ನ ದಶಮಾನೋತ್ಸವ ಕಾರ್ಯಕ್ರಮ ಆಚರಿಸಿದಾಗ ಸಮಾರೋಪ ಸಮಾರಂಭಕ್ಕೆ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸಿ ಆಶೀರ್ವಚನ ನೀಡಿದ್ದರು. ಹೀಗೆ ಶೃಂಗೇರಿ ಜಗದ್ಗುರುಗಳ ಪ್ರೇರಣೆ, ಆಶೀರ್ವಾದ, ಮಾರ್ಗದರ್ಶನದ ನೆಲೆಯಲ್ಲಿಯೇ ಅಂಬಿಕಾ ಸಂಸ್ಥೆಗಳು ಬೆಳೆದುಬರುತ್ತಿವೆ. ಇದೀಗ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಸಮಾರೋಪಕ್ಕೆ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸುತ್ತಿದ್ದು, ಮೇ 7ರಂದು ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಸಮಾರಂಭ ನಡೆಯಲಿದೆ ಎಂದರು.

ಮೇ 6ರಂದು ಶ್ರೀ ಗುರುಗಳ ಆಗಮನ, ಶ್ರೀ ಚಂದ್ರಮೌಳೀಶ್ವರ ಪೂಜೆ:

ಮೇ 6 ಸಂಜೆ ಶ್ರೀ ಗುರುಗಳು ಆಗಮಿಸಲಿದ್ದು, ಅಂಬಿಕಾ ಪರಿವಾರದ ವತಿಯಿಂದ ಪೂರ್ಣಕುಂಭ ಸ್ವಾಗತ, ಧೂಳೀ ಪಾದಪೂಜೆ ನಡೆಯಲಿದೆ. ತದನಂತರ ರಾತ್ರಿ ಸುಮಾರು ೮ ಗಂಟೆಯಿAದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿAದ ಶ್ರೀ ಶಂಕರ ಸಭಾಭವನದಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ.

ಮೇ 7: ಮೇ 7ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಅಂಬಿಕಾ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪಕ್ಕೆ ಸಾನ್ನಿಧ್ಯ ಒದಗಿಸಿಕೊಡಲಿದ್ದಾರೆ. ಈ ಸಂದರ್ಭದಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಗುರುವಂದನೆ ನಡೆಯಲಿದೆ. ನಂತರ ಜಗದ್ಗುರುಗಳಿಂದ ಆಶೀರ್ವಚನ ನಡೆಯಲಿದೆ.

ನೂತನ ಆಪ್ ಅನಾವರಣ:

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಸವಿನೆನಪಿಗಾಗಿ ವಿನೂತನ ಮೊಬೈಲ್ ಆಪ್ ಒಂದನ್ನು ಸಮಾಜಕ್ಕೆ ಸಮರ್ಪಿಸಲಾಗುತ್ತಿದೆ. ಮಹಾನಗರಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಓಲಾ, ಉಬರ್ ಮೊದಲಾದ ಬಾಡಿಗೆ ವಾಹನ ಸಂಬಂಧಿ ವ್ಯವಸ್ಥೆಯ ಮಾದರಿಯಲ್ಲಿ ಪುತ್ತೂರಿನ ಜನರಿಗೆ ಬಾಡಿಗೆ ಅಟೋ ರಿಕ್ಷಾಗಳನ್ನು ನಿಗದಿಪಡಿಸುವುದಕ್ಕೆ ಅನುವು ಮಾಡಿಕೊಡುವಂತಹ ಆಪ್ ಅನ್ನು ಅಂಬಿಕಾದ ವತಿಯಿಂದ ರೂಪಿಸಲಾಗಿದೆ. ‘ಹಿಂದೂ ಸಂಪರ್ಕ ಸಾರಿಗೆ’ ಎಂಬ ಹೆಸರಿನಲ್ಲಿ ಈ ಆಪ್ ಅನ್ನು ರೂಪಿಸಲಾಗಿದ್ದು, ಪುತ್ತೂರಿಗರಿಗೆ ಅಟೋ ರಿಕ್ಷಾಗಳನ್ನು ಬಾಡಿಗೆಗೆ ಪಡೆಯುವುದಕ್ಕೆ ಇದು ಅವಕಾಶ ಮಾಡಿಕೊಡಲಿದೆ. ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಈ ಆಪ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಆಪ್ ಮಹಾನಗರಗಳಲ್ಲಿ ಬಳಕೆಯಲ್ಲಿರುವ ವಾಹನ ಸಂಬಂಧಿ ಆಪ್‌ಗಳಂತೆ ಲಾಭಾಪೇಕ್ಷೆ ಅಥವ ಉದ್ಯಮದೃಷ್ಟಿ ಹೊಂದಿರದೆ ಕೇವಲ ಸೇವಾದೃಷ್ಟಿಯೊಂದಿಗೆ ಅಂಬಿಕಾದ ವತಿಯಿಂದ ರೂಪಿಸಲ್ಪಟ್ಟು ಸಮಾಜಕ್ಕೆ ಸಮರ್ಪಣೆಗೊಳ್ಳುತ್ತಿದೆ. ಈ ಆಪ್ ನಿಂದ ಯಾವುದೇ ಆರ್ಥಿಕ ಲಾಭವನ್ನು ಅಂಬಿಕಾ ಪಡೆದುಕೊಳ್ಳುವುದಿಲ್ಲ ಎಂಬುದು ಗಮನಾರ್ಹ. ಆಟೋ ಚಾಲಕರು ಹಾಗೂ ಪ್ರಯಾಣಿಕರು ಈ ಆಪ್ ಅನ್ನು ಡೌನ್‌ಲೋಡ್ ಮಾಡುವ ಮುಖಾಂತರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸಮಾಜಸೇವೆ:

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಬೆಳ್ಳಿಹಬ್ಬದ ಪ್ರಯುಕ್ತ ಸಮಾಜಮುಖಿ ಚಿಂತನೆಯನ್ನು ಅಂಬಿಕಾ ಜಾರಿಗೊಳಿಸಿದೆ. ಬಪ್ಪಳಿಗೆಯಲ್ಲಿನ ಮಾರಿಯಮ್ಮ ಗುಡಿಗೆ ಅಂಬಿಕಾದ ವತಿಯಿಂದ ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಶೀಟ್ ಅಳವಡಿಕೆ ಮಾಡಿಕೊಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!

ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…